ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ, ಪ್ರತಿಭಟನೆ, ಹರತಾಳ ಹಾಗೂ ಅಸಹಕಾರ ಚಳುವಳಿಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಮುಂದಿನ ಆರು ತಿಂಗಳು ಯಾವುದೇ ಸಮಸ್ಯೆಗಳಿದ್ದರೂ ಸಹ ಅವರು ಪ್ರತಿಭಟನೆ ನಡೆಸುವಂತಿಲ್ಲ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದು ಸಾರಿಗೆ ಕಾರ್ಮಿಕರ ಅಸಮಧಾನಕ್ಕೆ ಕಾರಣವಾಗಿದೆ.
ಸಾರಿಗೆ ಇಲಾಖೆಯ ನೌಕರರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿಂದೆಯೂ ಸರ್ಕಾರದ ವಿರುದ್ದ ತಿರುಗಿಬಿದ್ದಿದ್ದರು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸತತವಾಗಿ ಹತ್ತಾರು ದಿನ ಮುಷ್ಕರ ನಡೆಸಿದ್ದರು. ಆಗ ಸಾರಿಗೆ ಕಾರ್ಮಿಕರೊಡನೆ ಮಾತುಕತೆ ನಡೆಸಿದ್ದ ಕಾಂಗ್ರೆಸ್ ಪಕ್ಷವು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿತ್ತು.
ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಜೊತೆಗೆ, ಶಕ್ತಿ ಯೋಜನೆಗೆ ಹಣ ಹೊಂದಿಸುವ ಸಲುವಾಗಿ ಸಾರಿಗೆ ಇಲಾಖೆ ನೌಕರರ ಹಿತಾಸಕ್ತಿಯನ್ನೂ ಸಹ ಕಡೆಗಣಿಸುತ್ತಿರುವ ಆರೋಪ ಕೇಳಿಬಂದಿದೆ. ಈಗ ಮುಷ್ಕರ ಹಾಗೂ ಪ್ರತಿಭಟನೆ ನಡೆಸುವ ಅವಕಾಶಕ್ಕೂ ಸಹ ತಡೆಯೊಡ್ಡಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.