ತುಮಕೂರು: ಸೈಕಲ್ ಕಳ್ಳತನದ ಆಧಾರದ ಮೇಲೆ ವಿಚಾರಣೆಯ ನೆಪದಲ್ಲಿ ಜಯ ನಗರ ಠಾಣೆಗೆ ಬಂದ ವದ್ಧನೋರ್ವನನ್ನು ಪೊಲೀಸರೇ ಸಾಯಿಸಿದ್ದಾರೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಹನುಮಂತರಾಯಪ್ಪ (58), ಶವವಾಗಿ ಪತ್ತೆಯಾದ ವ್ಯಕ್ತಿ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿ ಬಳಿಯ ನಾಯಕರಬೀದಿಯಲ್ಲಿ ವಾಸವಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹನುಮಂತರಾಯಪ್ಪನ ವಿರುದ್ಧ ಸೈಕಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈತನನ್ನು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಜಯನಗರ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ನಂತರ ಮಧ್ಯರಾತ್ರಿ 12.30ಕ್ಕೆ ಸುಮಾರಿಗೆ ಬಿಟ್ಟು ಕಳುಹಿಸಿದ್ದರು.
ಮೃತನನ್ನು ಬಿಟ್ಟು ಪೊಲೀಸರು ಪರಾರಿ: ಸಿವಿಲ್ ಡ್ರೆಸ್ ನಲ್ಲಿ ಒಬ್ಬ ಹಾಗೂ ಯುನಿಫಾರ್ಮ್ ನಲ್ಲಿ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ಭಾನುವಾರ ಮತ್ತೆ ವಿಚಾರಣೆ ನೆಪದಲ್ಲಿ ಸಂಜೆ 5ಕ್ಕೆ ಹನುಮಂತರಾಯಪ್ಪನನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಇಬ್ಬರೂ ಸಿಬ್ಬಂದಿ ಸೇರಿಕೊಂಡು ಬೈಕ್ ನಲ್ಲಿ ಕರೆದೊಯ್ದಿದ್ದಾರೆ. ಬಳಿಕ ಸಂಜೆ 6:30 ರ ವೇಳೆಗೆ ಪುನಃ ವಾಪಸ್ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ ಮೃತಪಟ್ಟಿ ದ್ದಾರೆ ಎನ್ನಲಾಗಿದೆ.
ಮೃತನನ್ನು ನಗರದ ಶೆಟ್ಟಿಹಳ್ಳಿ ರಿಂಗ್ ರೋಡ್ ಬಳಿ ಬಿಟ್ಟು ಪೊಲೀಸರು ಪರಾರಿ ಆಗಲು ಯತ್ನಿಸಿದ್ದಾರೆ. ಈ ವೇಳೆ ಹನುಮಂತ ರಾಯಪ್ಪನ ಮೈದುನ ಪೊಲೀಸರನ್ನು ವಿಚಾರಿಸಿದ್ದಕ್ಕೆ ಯಾಕೋ ಸುಸ್ತಾಗಿದ್ದಾನೆ ಅಂತ ಸಬೂಬು ಹೇಳಿ ಸ್ಥಳದಿಂದ ಓಡಿ ಹೋಗಿದ್ದಾರೆ. ಮೈದುನ ಪರೀಕ್ಷಿಸಲಾಗಿ ಹನುಮಂತರಾಯಪ್ಪ ಮೃತಪಟ್ಟಿರುವುದು ದೃಢವಾಗಿದ್ದು, ದೇಹದಲ್ಲಿ ರಕ್ತ ಹೆಪ್ಪು ಗಟ್ಟಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಜಯನಗರ ಠಾಣೆಯ ಪೊಲೀಸರೇ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದು. ಘಟನೆ ನಡೆದು ಹಲವು ಗಂಟೆ ಕಳೆದರೂ ಮೇಲಧಿಕಾರಿಗಳು ಸೇರಿದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿಲ್ಲವೆಂದು ಕುಟುಂಬಸ್ಥರು, ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಕಿಡಿಕಾರಿದ್ದಾರೆ. ಠಾಣೆಯಲ್ಲಿಯೇ ಹಿಂಸೆ ಕೊಟ್ಟು ಸಾಯಿಸಿ ದಾರಿ ಮಧ್ಯೆ ಮೃತನನ್ನು ಬಿಟ್ಟು ಪರಾರಿಯಾಗಿ ರುವ ಪೊಲೀಸರ ಕಾರ್ಯವೈಖರಿ ನಾಚಿಕೆಗೇಡಿತನವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.