Saturday, 23rd November 2024

ಯೋಧರ ಹೆಸರಿನಲ್ಲಿ ಆನ್‌ಲೈನ್‌ ವಂಚನೆಗೆ ಯತ್ನ

ಕಾರವಾರ: ಜನರನ್ನು ಯಾಮಾರಿಸಿ ಆನ್‌ಲೈನ್‌ ವಂಚನೆ ಮಾಡುವ ಖದೀಮರು ಇದೀಗ ಯೋಧರ ಹೆಸರಿನಲ್ಲಿ ವಂಚನೆಗೆ ಇಳಿದಿದ್ದಾರೆ.

ಕಾರವಾರ ನಗರದ ಉದ್ಯಮಿ ಶುಭಂ ಕಳಸ ಎನ್ನುವವರಿಗೆ ಖದೀಮರು ಯೋಧರ ಹೆಸರಿ ನಲ್ಲಿ ಆನ್‌ಲೈನ್ ವಂಚನೆ ಮಾಡಲು ಮುಂದಾಗಿದ್ದರು. ತಾನು ಸಿಐಎಸ್‌ಎಫ್ ಯೋಧನೆಂದು ಪರಿಚಯಿಸಿಕೊಂಡ ಆರೋಪಿ, ಕಾರವಾರದ ಮಾಜಾಳಿ ಶಾಲೆ ಯೊಂದರ ಕಟ್ಟಡ ನಿರ್ಮಾಣಕ್ಕೆ 2 ಸಾವಿರ ಸಿಮೆಂಟ್ ಬ್ಲಾಕ್‌ಗಳು ಬೇಕು. ನಾನು ಶಾಲೆಗೆ ಕೊಡುಗೆ ಯಾಗಿ ನೀಡುತ್ತಿದ್ದೇನೆ. ಎರಡು ಸಾವಿರ ಸಿಮೆಂಟ್ ಬ್ಲಾಕ್‌ಗಳಿಗೆ ಎಷ್ಟಾಗಬಹುದು ಎಂದು ವಿಚಾರಿಸಿದ್ದಾನೆ.

ಕಾರವಾರದಲ್ಲಿ ಭಾರತೀಯ ನೌಕಾನೆಲೆ ಇರುವುದರಿಂದ ಸೇನೆಯ ಅಧಿಕಾರಿ ಇರಬಹುದು ಎಂದು ಶುಭಂ ಕಳಸ ಕೂಡ ವಂಚಕ ನನ್ನು ನಂಬಿದ್ದಾರೆ. ಮಾತಿನಂತೆ ಸೋಮವಾರ ಚಾಲಕ ಹಾಗೂ ಕಾರ್ಮಿಕರೊಂದಿಗೆ ಬ್ಲಾಕ್‌ಗಳನ್ನು ಕಳುಸಿದ್ದಾರೆ. ಈ ವೇಳೆ ಕರೆ ಮಾಡಿದ ವಂಚಕ ಅಕೌಂಟ್ ಧೃಡೀಕರಿಸಿಕೊಳ್ಳಲು 1 ರೂಪಾಯಿ ಕಳುಹಿಸಲು ಹೇಳಿದ್ದಾನೆ. ಹಾಗೆಯೇ 1 ರೂಪಾಯಿ ಕಳುಹಿಸಿದ ತಕ್ಷಣ 2 ರೂಪಾಯಿ ಹಣವನ್ನು ಮತ್ತೆ ವಾಪಸ್ ಕಳುಹಿಸಿದ್ದಾನೆ. ಇದರಿಂದ ನಂಬಿಕೆ ಇನ್ನೂ ಬಲವಾಗಿದೆ. ಅದೇ ವೇಳೆಗೆ ಶಾಲೆಗೆ ಬ್ಲಾಕ್ ತೆಗೆದುಕೊಂಡು ಹೋಗಿದ್ದ ವಾಹನದ ಚಾಲಕ ಕರೆ ಮಾಡಿ, ಯಾರು ಕೂಡಾ ಶಾಲೆಗೆ ಸಿಮೆಂಟ್ ಬ್ಲಾಕ್ಸ್ ಆರ್ಡರ್ ಮಾಡಿಲ್ಲವಂತೆ. ಇಲ್ಲಿನ ಶಿಕ್ಷಕರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಅಷ್ಟರಲ್ಲಿ ವಂಚಕರು ಶುಭಂ ಅವರ ಖಾತೆಯಿಂದ 500 ರೂಪಾಯಿ ಕನ್ನ ಹಾಕಿದ್ದಾರೆ. 500 ರೂಪಾಯಿ ಡೆಬಿಟ್ ಆಗಿರುವ ಸಂದೇಶ ಬಂದ ತಕ್ಷಣ ಶುಭಂ, ತಮ್ಮ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿದ್ದಾರೆ. ಕೂಡಲೇ ಸೈಬಲ್‌ ಕ್ರೈಂ ಠಾಣೆಗೆ ಕರೆ ಮಾಡಿ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ. ಕರೆ ಮಾಡಿದ ವಾಯ್ಸ್ ರೆಕಾರ್ಡ್ ಹಾಗೂ ವಾಟ್ಸಾಪ್ ಸಂದೇಶಗಳನ್ನು ನೀಡಿ ದೂರು ದಾಖಲಿಸಿದ್ದಾರೆ.

ಕಾರವಾರದ ನೌಕಾನೆಲೆಯಲ್ಲಿ ಯೋಧರು ಇರುವ ಕಾರಣ ಇವರ ಮಾತನ್ನು ನಂಬಿ ಸಿಮೆಂಟ್ ಬ್ಲಾಕ್ ಕಳುಹಿಸಿದ್ದೆ. ಇದೇ ರೀತಿ ನಗರದ ಮೀನು ವ್ಯಾಪಾರಿ, ಹಣ್ಣಿನ ಅಂಗಡಿ ಮಾಲೀಕ ಹಾಗೂ ಐಸ್‌ಕ್ರೀಮ್ ವ್ಯಾಪಾರಿಗಳಿಗೂ ಕರೆ ಮಾಡಿ ಮೋಸ ಮಾಡಲು ಯತ್ನಿಸಿದ್ದರು. ಆದರೆ ಯಾರೂ ಕೂಡ ಕ್ಯೂಆರ್ ಕೋಡ್ ನೀಡಲು ಮುಂದಾಗದ ಕಾರಣ ಖದೀಮರ ಯತ್ನ ವಿಫಲವಾಗಿದೆ.