ತಿಪಟೂರಿನಲ್ಲಿ ರಾಜ್ಯ ಮಟ್ಟದ ತೆಂಗು ಬೆಳೆಗಾರರ ಸಭೆ
ತಿಪಟೂರು : ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿರುವ ಹಾಗೂ ತೆಂಗಿನ ಬೆಳೆಗಾರರು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ತೆಂಗು ಬೆಳೆಗಾರರ ಒಟ್ಟಾರೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ತೆಂಗು ಬೆಳೆಗಾರರ ದುಂಡು ಮೇಜಿನ ಸಭೆಯನ್ನು ಸಂಯುಕ್ತ ಹೋರಾಟ – ಕರ್ನಾಟಕ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ನಗರದ ಸರ್ಕಾರಿ ನೌಕಕರ ಸಮುದಾಯ ಭವನದಲ್ಲಿ ಸೋಮವಾರ ಸಂಯುಕ್ತ ಹೋರಾಟ – ಕರ್ನಾಟಕ ವತಿಯಿಂದ ರಾಜ್ಯ ಮಟ್ಟದ ತೆಂಗು ಬೆಳೆಗಾರರ ದುಂಡು ಮೇಜಿನ ಸಭೆಯನ್ನು ನಡೆಸಲಾಯಿತು.
ರಾಜ್ಯ ತೆಂಗಿನ ಸೀಮೆಯ ರೈತ ಪರ ಸಂಘಟನೆಗಳಿ೦ದ ೨೦೦ಕ್ಕೂ ಹೆಚ್ಚು ನಾಯಕರು ಹಾಗೂ ಸಂಘಟನಾಕಾರರು ತೆಂಗು ಬೆಳೆಗಾರರ ಸಮಸ್ಯೆಗಳನ್ನ ವಿವಿಧ ಆಯಾಮಗಳಿಂದ ಚರ್ಚಿಸಿದರು. ಕೊಬ್ಬರಿ ಹಾಗೂ ತೆಂಗಿನ ಉತ್ಪನ್ನಗಳಿಗೆ ಬೆಲೆ ಕುಸಿಯಲು ಸರ್ಕಾರಗಳ ಆಮದು ಮತ್ತು ರಫ್ತು ನೀತಿಗಳು ಮುಖ್ಯ ಕಾರಣ. ತೆಂಗಿನ ಉತ್ಪನ್ನಗಳನ್ನು ಮತ್ತು ಅದಕ್ಕೆ ಪರ್ಯಾಯವಾಗಿರುವ ಅಗ್ಗದ ತಾಳೆಎಣ್ಣೆ, ಸೋಯಾ ಎಣ್ಣೆಗಳನ್ನು ಆಮದು ಮಾಡಿ ಕೊಳ್ಳುತ್ತಿರುವುದ ತೆಂಗಿನ ಉತ್ಪನ್ನಗಳ ಬೇಡಿಕೆ ಇಳಿಮುಖವಾಗಲು ಕಾರಣ. ಸರ್ಕಾರಗಳ ಕಾರ್ಪೊರೆಟ್ ಪರ ಧೋರಣೆಯಿಂದಾಗಿ ತೆಂಗಿನ ಉತ್ಪನ್ನಗಳನ್ನು ಸುಂಕರಹಿತವಾಗಿ ಆಮದು ಮಾಡಿ ಕೊಳ್ಳಲಾಗುತ್ತಿದೆ.
ಜೊತೆಗೆ ಸರ್ಕಾರದ ಸಂಸ್ಥೆಗಳೇ ತೆಂಗಿನ ಉತ್ಪನ್ನಗಳ ಬದಲಿಗೆ ಆಮದುಗೊಂಡ ಅಗ್ಗದೆ ತೈಲಗಳಿಗೆ ಮೊರೆಹೋಗುತ್ತಿವೆ. ತೆಂಗು ಉತ್ಪನ್ನಗಳ ಮೌಲ್ಯವರ್ಧನೆ, ಅವುಗಳ ಮಾರುಕಟ್ಟೆಯಲ್ಲಿ ಸರ್ಕಾರ ಯಾವುದೇ ಸಹಾಯ ಮಾಡದಿರುವುದು ಕೂಡ ತೆಂಗಿನ ಉತ್ಪನ್ನಗಳ ಬಳಕೆಗೆ ತಗ್ಗಿಸಿವೆ. ಇದೆಲ್ಲರದಿಂದಾಗಿ ತೆಂಗಿನ ಉತ್ಪನ್ನಗಳ ಬೆಲೆ ಕುಸಿತವಾಗಿದೆ.
ಇದರ ಜೊತೆಗೆ ತೆಂಗಿನ ಉಪಉತ್ಪನ್ನಗಳಾದ ನಾರು, ಚಿಪ್ಪು, ತಿರುಳು, ನೀರಾ, ಮರ, ಗರಿಗಳಿಗೆ ಸರ್ಕಾರದ ಪ್ರೋತ್ಸಾಹವಿಲ್ಲದೆ ಬೇಡಿಕೆ ಕುಸಿದಿದೆ. ಅಲ್ಲಿಂದ ರೈತರ ಉಪಆದಾಕ್ಕೆ ಕತ್ತರಿ ಬಿದ್ದಿದೆ. ಇದೂ ಸಾಲದೆಂಬ0ತೆ ರೋಗಗಳು, ಒಣ ಬರ, ಹಸಿಬರಗಳು ಉರಿಯುವ ಗಾಯಕ್ಕೆ ತುಪ್ಪ ಸುರಿದಂತೆ ಬೆಳೆಗಳನ್ನು ನಾಶ ಮಾಡುತ್ತಿವೆ ಮತ್ತು ರೈತ ನಷ್ಟವನ್ನು ಎದುರಿಸುತ್ತಿದ್ದಾನೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಸಭೆಯಲ್ಲಿ ಮಂಡಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ವಿರುವ ಕರಡು ದಸ್ತಾವೇಜನ್ನು ಸರ್ವಾನುಮತ ದಿಂದ ಸಭೆ ಅಂಗೀಕರಿಸಿತು. ಆದ್ದರಿಂದ ಕೊಬ್ಬರಿಗೆ ಬೆಂಬಲ ಬೆಲೆಯನ್ನು ರೂ.೨೦,೦೦೦ಕ್ಕೆ ಏರಿಸಬೇಕು ಮತ್ತು ರಾಜ್ಯ ಸರ್ಕಾರ ರೂ.೫,೦೦೦ ಪ್ರೋತ್ಸಾಹ ಧನ ಕೊಡಬೇಕು ಮುಂತಾದ ಬೇಡಿಕೆಗಳಿಗೆ ಒತ್ತಾಯಿಸಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹೋರಾಟಗಳನ್ನು ನಡೆಸಬೇಕೆಂದು ತೀರ್ಮಾನವಾಯಿತು. ಈ ದಿಕ್ಕಿನಲ್ಲಿ ಆಗಸ್ಟ್ನಲ್ಲಿ ಸಂಸದರ ಮನೆ ಮುಂದೆ ಪ್ರತಿಭಟನೆ, ರಾಜಧಾನಿಗೆ ಪಾದಯಾತ್ರೆ ನಡೆಸಬೇಕೆಂದು ನಿರ್ಧಾರವಾಯಿತು. ಈ ಹೋರಾಟ ವನ್ನು ಸುಸಂಘಿತವಾಗಿ ಮುನ್ನಡೆಸಲು ಸಮನ್ವಯ ಸಮಿತಿಯನ್ನು ರಚಿಸಲಾಯಿತು.
ಈ ಸಭೆಯಲ್ಲಿ ಸಂಯುಕ್ತ ಹೋರಾಟ – ಕರ್ನಾಟಕದ ಸಂಚಾಲಕ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಾಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ರಾಜ್ಯ ರೈತ ಸಂಘ (ಸಾಮೂಹಿಕ ನಾಯಕತ್ವ) ಯೋಗೀಶ್ವರಸ್ವಾಮಿ, ಟಿ.ಬಿ.ಜಯಾನಂದಯ್ಯ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ (ಎಐಕೆಕೆಎಂಎಸ್) ಅಖಿಲ ಭಾರತ ಉಪಾಧ್ಯಕ್ಷ ಡಾ|| ಟಿ.ಎಸ್.ಸುನೀತ್ ಕುಮಾರ್, ರಾಜ್ಯ ಕಾರ್ಯದರ್ಶಿ ಎಂ.ಶಶಿಧರ್, ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಧ್ಯಕ್ಷ ಬಸವರಾಜಪ್ಪ, ಕರ್ನಾಟಕ ಪ್ರಾಂತ್ಯ ರೈತ ಸಂಘದ ನವೀನ್ ಕುಮಾರ್, ಜಿಲ್ಲಾಧ್ಯಕ್ಷ ಅಜ್ಜಪ್ಪ, ಬಿ.ಉಮೇಶ್, ಅನ್ನದಾತ ರೈತ ಸಂಘದ ಮಧುಸೂಧನ್, ಅಖಿಲ ಭಾರತ ಕಿಸಾನ್ ಸಭಾ ಗೋವಿಂದರಾಜು ಮತ್ತು ಪ್ರೋ.ಸೋಮಶೇಖರಪ್ಪ, ತಿಮ್ಲಾಪುರ ದೇವರಾಜ್, ಚನ್ನಬಸವಣ್ಣ, ಜಯಚಂದ್ರ ಶರ್ಮ, ಶ್ರೀಹರ್ಷ, ಶ್ರೀಕಾಂತ್, ಎಚ್.ಪಿ.ಶಿವಪ್ರಕಾಶ್, ಬಿ.ಲೋಕೇಶ್, ರಂಗಧಾಮಯ್ಯ, ಶಂಕರಪ್ಪ ಪೂಣಚ್ಚ, ಲೋಕೇಶ್ ಇದ್ದರು.
*
ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದಂತಹ ಮಾತನ್ನು ಮರೆತು ಕಣ್ಣು ಒರೆಸುವ ತಂತ್ರಕ್ಕೆ ಮುಂದಾಗಿದೆ. ಕೇವಲ ೧,೨೫೦ ಪ್ರೋತ್ಸಾಹ ಧನ ನೀಡಲು ಮುಂದಾಗಿರುವುದು ರೈತರಿಗೆ ಮಾಡಿರುವ ಅವಮಾನ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವೂ ರಾಜ್ಯದ ರೈತರ ನಿಯೋಗವನ್ನು ಕರೆದುಕೊಂಡು ಹೋಗಿ ತೋಟಗಾರಿಕೆ ಇಲಾಖೆ ನೀಡಿರುವ ವೆಚ್ಚದ ಬೆಲೆಯನ್ನು ೧೬,೬೭೦ ರೂ ಬೆಂಬಲ ಬೆಲೆಯನ್ನಾಗಿ ಘೋಷಿಸಬೇಕು. ಅಲ್ಲದೇ ಕೊಬ್ಬರಿ ನಫೆಡ್ ಮೂಲಕ ಖರೀದಿ ಮಾಡುವಾಗ ಸೀಮಿತ ರೈತರಿಗೆ ಸಿಗುವ ಬದಲು ಎಲ್ಲಾ ರೈತರಿಂದ ಕೊಬ್ಬರಿಯನ್ನು ಕೊಳ್ಳುವಂತೆ ಯೋಜನೆ ಮಾಡಬೇಕು.
ಯೋಗೀಶ್ವರಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘ (ಸಾಮೂಹಿಕ ನಾಯಕತ್ವ)