Thursday, 31st October 2024

ಮಾಜಿ ಶಾಸಕ ಕೆ.ಕೆಂಪೇಗೌಡ ವಿಧಿವಶ

ಪಾಂಡವಪುರ: ಜಿಲ್ಲೆಯ ಪಾಂಡವಪುರ ಕ್ಷೇತ್ರದ ಮಾಜಿ ಶಾಸಕ ಕೆ. ಕೆಂಪೇಗೌಡ (96) ವಿಧಿವಶರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕೆ. ಕೆಂಪೇಗೌಡರು ಬುಧವಾರ ನಿಧನ ಹೊಂದಿದ್ದಾರೆ. ಗುರುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ವಿವಿಧ ನಾಯಕರು ಸಂತಾಪ ಸೂಚಿಸಿ ದ್ದಾರೆ.

ಕೆ.ಕೆಂಪೇಗೌಡ ಮೂರು ಬಾರಿ ಶಾಸಕರಾಗಿದ್ದರು. ತಾಲೂಕು ಬೋರ್ಡ್ ಸದಸ್ಯರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. ವ್ಯವಸಾಯೋತ್ಪನ್ನ ಸಹಕಾರ ಸಂಘದ ನಿರ್ದೇಶಕ ರಾಗಿ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದರು.

1983ರಲ್ಲಿ ಚಿನಕುರಳಿ ಗ್ರಾಮದ ಚೇರ್‌ಮನ್ ಆಗಿದ್ದರು. ಆಗ ವಿಧಾನಸಭೆ ಚುನಾವಣೆ ಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 1985ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದರು.

ಕಾಂಗ್ರೆಸ್ ಪಕ್ಷ ಸೇರಿದ್ದ ಕೆ. ಕೆಂಪೇಗೌಡರು 1999ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಸರಳ ಜೀವನದಿಂದಲೇ ಪ್ರಸಿದ್ಧಿ ಪಡೆದಿದ್ದರು.

ಮಂಡ್ಯ ಜಿಲ್ಲೆ ಪಾಂಡವಪುರದ ಮಾಜಿ ಶಾಸಕ ಕೆ. ಕೆಂಪೇಗೌಡರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. “ಸರಳ ಹಾಗೂ ಸಜ್ಜನ ರಾಜಕಾರಣಿ ಕೆಂಪೇಗೌಡರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಚಿನಕುರುಳಿ ಕೆಂಪೇ ಗೌಡರು ಎಂದೇ ಖ್ಯಾತಿ ಪಡೆದಿದ್ದ ಅವರು ಹಿಂದೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು. ಒಟ್ಟು ಮೂರು ಬಾರಿ ವಿಧಾನಸಭೆ ಪ್ರತಿನಿಧಿಸಿದ್ದರು” ಎಂದು ಹೇಳಿದ್ದಾರೆ.

“ಕೆಂಪೇಗೌಡರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗ, ಬಂಧು ಬಳಗಕ್ಕೆ ಈ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಡಿ. ಕೆ. ಶಿವಕುಮಾರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.