Sunday, 15th December 2024

ಪೇಪರ್ ಮಿಲ್​ಗೆ ಬೆಂಕಿ: ಲಕ್ಷಾಂತರ ಮೌಲ್ಯದ ಪೇಪರ್​ ಬೆಂಕಿಗಾಹುತಿ

ಮೈಸೂರು: ಪೇಪರ್ ಮಿಲ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಪೇಪರ್ ಭಸ್ಮವಾಗಿರುವ ಘಟನೆ ಜಿಲ್ಲೆಯ ನಂಜನಗೂಡಿನ ಬಳಿ ನಡೆದಿದೆ.

ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿರುವ ಸೌತ್ ಇಂಡಿಯಾ ಪೇಪರ್ ಮಿಲ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸುದ್ದಿ ತಿಳಿದಾಕ್ಷಣ ಅಗ್ನಿಶಾಮಕ ದಳದವರು ತಕ್ಷಣ ಘಡನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ನಂಜನಗೂಡು ಬಳಿಯ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಸೌತ್ ಇಂಡಿಯಾ ಪೇಪರ್ ಮಿಲ್ ಕಾರ್ಖಾನೆಯ ಬಳಿ ಪೇಪರ್ ಮಿಲ್ ಕಾರ್ಖಾ ನೆಯ ಗೋಡಾನ್​ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಗೊಡೌನ್​ನಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪೇಪರ್ ಸುಟ್ಟು ಭಸ್ಮವಾಗಿದೆ.

ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದ್ದು, ಸುಮಾರು 4 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಅಗ್ನಿಶಾಮಕ ಅಧಿಕಾರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಕಾರ್ಖಾನೆಯ ಬಳಿ ಇರುವ ಪೇಪರ್ ಗೊಡೌನ್​ನಲ್ಲಿ ಶನಿವಾರ ಬೆಳಗಿನಜಾವ ಬೆಂಕಿ ಕಾಣಿಸಿಕೊಂಡಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಸಿಕೊಂಡಿದೆ ಎಂದು ಶಂಕಿಸಲಾಗಿದೆ ಎಂದು ಹೇಳಿದರು. ಈ ಘಟನೆ ಕುರಿತು ನಂಜನಗೂಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.