ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಬಿಜೆಪಿ ಹೈಕಮಾಂಡ್ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ.
ಹೀಗಾಗಿ ಭಾನುವಾರ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ತನ್ನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮೂಳೆ ಅವರಿಗೆ ಮಣೆ ಹಾಕಿದೆ. ಮೂರು ಸ್ಥಾನಗಳಿಗೆ 40 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಒಕ್ಕಲಿಗ ಸಮುದಾಯದ ಮಾಜಿ ಸಚಿವ ಸಿ.ಟಿ ರವಿ, ಗಂಗಾಮತಸ್ಥ ಎನ್. ರವಿಕುಮಾರ್ ಹಾಗೂ ಮರಾಠಾ ಸಮುದಾಯದ ಎಂ.ಜಿ ಮೂಳೆ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಬಿಜೆಪಿ ಸಂಖ್ಯಾಬಲದ ಆಧಾರದ ಮೇಲೆ ಮೂರು ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಮೂರು ಅಭ್ಯರ್ಥಿಗಳನ್ನು ಘೋಷಿಸಿದ್ದು, ವಿಧಾನ ಪರಿಷತ್ ಹಾಲಿ ಸದಸ್ಯರಾದ ಎನ್ ರವಿ ಕುಮಾರ್ ಅವರಿಗೆ ಮತ್ತೊಮ್ಮೆ ಚಾನ್ಸ್ ಕೊಟ್ಟಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಸಿಟಿ ರವಿ ಅವರಿಗೆ ಹೈಕಮಾಂಡ್ ಬಂಪರ್ ಗಿಫ್ಟ್ ಕೊಟ್ಟಿದೆ. ಇತ್ತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್ಗೆ ಅವರಿಗೆ ಪರಿಷತ್ ನಲ್ಲಿ ಸ್ಥಾನ ಸಿಗುತ್ತದೆ ಎಂಬ ಚರ್ಚೆ ನಡೆದಿದ್ದು, ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗಿದೆ.