ಮೈಸೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಪಿರಿಯಾಪಟ್ಟಣದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪಕ್ಕದಲ್ಲಿದ್ದ ಮಗುವನ್ನು ದೂರಕ್ಕೆ ತಳ್ಳಿದ ಪರಿಣಾಮ ಎರಡು ವರ್ಷದ ಗಂಡು ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಹೇಮಲತಾ (21) ಮೃತರು.
ಇನ್ನು ಕಬಿನಿ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ನಂಜನಗೂಡು-ಊಟಿ ಹೆದ್ದಾರಿ ರಸ್ತೆ ಬಂದ್ ಆಗಿದೆ. ನಂಜುಂಡೇಶ್ವರ ದೇಗುಲದ ಆವರಣದಲ್ಲಿರುವ ಭಕ್ತಿ ಮಾರ್ಗದವರೆಗೆ ನೀರು ಬಂದು ನಿಂತಿದೆ.
ಹುಣಸೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಜಡಿ ಮಳೆಯಿಂದಾಗಿ ವಿವಿಧ ಬಡಾವಣೆಯ ಮನೆಗಳಿಗೆ ಮಳೆ ನೀರಿನೊಂದಿಗೆ ಒಳಚರಂಡಿ ನೀರು ಮನೆಗಳಿಗೆ ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹನಗೋಡು-ಪಂಚವಳ್ಳಿ ಮುಖ್ಯ ರಸ್ತೆ ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ.