ತುಮಕೂರು: ವಿಶೇಷ ಘಟಕ ಯೋಜನೆ(ಎಸ್‌ಸಿಪಿ) ಹಾಗೂ ಗಿರಿಜನ ಉಪಯೋಜನೆ(ಟಿಎಸ್‌ಪಿ)ಯಡಿ ಜಿಲ್ಲೆಗೆ ನಿಗಧಿಪಡಿಸಿರುವ ಗುರಿಯನ್ನು ಪೂರ್ಣ ಗೊಳಿಸದ ಅಧಿಕಾರಿಗಳಿಗೆ ನೋಟೀಸ್ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೇಂದ್ರ, ರಾಜ್ಯ, ಜಿಲ್ಲಾ ವಲಯದಿಂದ 2023-24ನೇ ಸಾಲಿಗಾಗಿ ಎಸ್‌ಸಿಪಿ/, ಟಿಎಸ್‌ಪಿ ಯೋಜನೆಗಳಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗಾಗಿ ಸೌಲಭ್ಯ ಕಲ್ಪಿಸಲು ವಿವಿಧ ಇಲಾಖೆಗಳಿಗೆ ನಿಗಧಿಯಾಗಿರುವ ಅನುದಾನವನ್ನು ವಿನಿಯೋಗಿಸದೆ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳು ಜನವರಿ 12ರೊಳಗಾಗಿ ನಿಗಧಿತ ಕಾಮಗಾರಿ, ಸೌಲಭ್ಯಗಳಿಗೆ ಸದ್ವಿನಿಯೋಗಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ.ಜಾತಿ, ಪ.ಪಂಗಡದವರಿಗಾಗಿಯೇ ಮೀಸಲಿರುವ ಸೌಲಭ್ಯಗಳನ್ನು ತಲುಪಿಸಲು ವಿಳಂಬ ಮಾಡಬಾರದು. ವಿಳಂಬಕ್ಕೆ ಕಾರಣ ಕೇಳಿದಾಗ ಯಾವುದೇ ನೆಪ ಹೇಳಬಾರದು. ಮುಂದಿನ ಸಭೆಯೊಳಗಾಗಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ನಿರ್ದೇಶಿಸಿದರಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ತಲುಪಿಸಬೇಕಾದ ಇಂತಹ ಯೋಜನೆಗಳನ್ನು ಸರಿಯಾದ ಕ್ರಮದಲ್ಲಿ ಅರ್ಹ ಪಲಾನುಭವಿಗಳಿಗೆ ತಲುಪಬೇಕು. ಬಿಡುಗಡೆಯಾದ ಅನುದಾನನ್ನು ಸಂಪೂರ್ಣವಾಗಿ ಉಪಯೋಗಿಸಬೇಕು. ಮುಂದಿನ ಪ್ರಗತಿ ಪರಿಶೀಲನಾ ಸಭೆಯೊಳಗೆ ಎಲ್ಲಾ ಇಲಾಖಾ ಅಧಿಕಾರಿಗಳು ನೂರಕ್ಕೆ ನೂರ ರಷ್ಟು ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಿ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಸೂಚಿಸಿದರು.
ಎಸ್‌ಸಿಪಿ, ಟಿಎಸ್‌ಪಿ ಯೋಜನಾನುಷ್ಟಾನದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿರುವ ರೇಷ್ಮೆ, ಅರಣ್ಯ, ಕೈಗಾರಿಕೆ ಮತ್ತು ವಾಣಿಜ್ಯ, ವಾರ್ತಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮಧುಗಿರಿ, ಮಧುಗಿರಿ, ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಸ್ಕಾಂ, ವಿಶ್ವೇಶ್ವರಯ್ಯ ಜಲ ನಿಗಮಗಳ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಜ.10ರಂದು ಸಾರ್ವಜನಿಕರ ಕುಂದು ಕೊರತೆ ಸಭೆ
ತುಮಕೂರು: ತುಮಕೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮಧುಗಿರಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಜನವರಿ 10 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ “ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ” ಸಭೆಯನ್ನು ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ವಲಿಬಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.