ಹುಬ್ಬಳ್ಳಿ: ಅಧಿಕಾರದ ಅರ್ಥವೇ ಸೇವೆ. ಅಧಿಕಾರದಲ್ಲಿ ಇರುವವರು ಪ್ರತಿ ನಾಗರಿಕರ ಸೇವೆ ಮಾಡಬೇಕು. ದೇಶದಲ್ಲಿ ಇಂದು ನಾವು ಈ ರೀತಿಯ ಪರಿವರ್ತನೆ ತಂದಿದ್ದೇವೆ ಎಂದು ಕೇಂದ್ರ ಸಂಚಾರ, ರೈಲ್ವೆ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪಂ. ಸವಾಯಿ ಗಂಧರ್ವ ಅವರ ಸ್ಮರಣಾರ್ಥ ಅಂಚೆ ಇಲಾಖೆ ಹಾಗೂ ಕೇಂದ್ರ ಸಂವಹನ ಸಚಿವಾಲಯ ಹೊರ ತಂದ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಧಿಕಾರದ ಅರ್ಥವನ್ನು ಪ್ರಧಾನಿ ಮೋದಿಯವರು ಬದಲಾಯಿಸಿದರು. ನಾವು ಎಲ್ಲ ರೀತಿಯ ಗುಲಾಮಗಿರಿ ಯನ್ನು ಬಿಡಬೇಕು ಎಂಬುದು ಮೋದಿಯವರ ಆಶಯವಾಗಿದೆ ಎಂದರು.
ಇದು ನನಗೆ ಬಹಳ ಭಾವಾನಾತ್ಮಕ ಕಾರ್ಯಕ್ರಮ, ದೇಶದ ಹೆಸರನ್ನು ವಿಶ್ವದಾದ್ಯಂತ ಬೆಳಗಿಸಿದ ಮಹಾನ್ ಸಾಧಕ ಪಂ. ಸವಾಯಿ ಗಂಧರ್ವರು. ದೇಶ ಕಂಡ ಮೂವರಲ್ಲಿ ಇಬ್ಬರು ಗಂಧರ್ವರು ಈ ಭಾಗದವರು ಎಂಬುದು ಹೆಮ್ಮೆಯ ಸಂಗತಿ. 1929ರಲ್ಲಿ ಬ್ರಿಟಿಷ್ ಗವರ್ನರ್ ಎದುರು ಸವಾಯಿ ಗಂಧರ್ವರು ಸತತ 3 ಗಂಟೆಗಳ ಕಾಲ ಸಂಗೀತ ಕಛೇರಿ ನೀಡಿದ್ದರು. ಬಳಿಕ ಗವರ್ನರ್ ಅವರು ಎದ್ದು ನಿಂತು ಗೌರವ ಸಲ್ಲಿಸಿದ್ದರು. ಈ ಮೂಲಕ ಸಂಗೀತಕ್ಕೆ ಇರುವ ಶಕ್ತಿಯನ್ನು ಗಂಧರ್ವರು ಬ್ರಿಟಿಷರಿಗೆ ಪರಿಚಯಿಸಿದ್ದರು ಎಂದು ಹೇಳಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಲಾದ ಜೋಶಿ ಮಾತನಾಡಿ, ಸವಾಯಿ ಗಂಧರ್ವರು ಹಿಂದುಸ್ತಾನಿ ಸಂಗೀತದ ಕಂಪನ್ನು ಎಲ್ಲೆಡೆ ಹರಿಸಿದವರು. ಕೆಲವು ವ್ಯಕ್ತಿಗಳಿಂದ ನಗರದ ಹಿರಿಮೆ ಹೆಚ್ಚುತ್ತದೆ. ಪಂ. ಸವಾಯಿ ಗಂಧರ್ವರು, ಪಂ. ಭೀಮಸೇನ ಜೋಶಿ, ಡಾ. ಗಂಗೂ ಬಾಯಿ ಗಾನಗಲ್ ಅವರಿಂದ ಧಾರವಾಡದ ಹಿರಿಮೆ ಹೆಚ್ಚಿದೆ ಎಂದರು.
ಚೀಫ್ ಪೋಸ್ಟ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ ಅವರು ಸಚಿವ ಅಶ್ವಿನಿ ವೈಷ್ಣವ ಅವರಿಗೆ ಅಂಚೆ ಚೀಟಿಯ ಅಲ್ಬಂ ಹಸ್ತಾಂತರಿಸಿದರು. ಖ್ಯಾತ ನೇತ್ರ ತಜ್ಞ ಡಾ. ಎಂ. ಎಂ. ಜೋಶಿ, ನಾರಾಯಣ ರಾವ್ ಹಾನಗಲ್, ಸೋಮನಾಥ ಜೋಶಿ ಇದ್ದರು. ಪ್ರವೀಣ ಜೋಶಿ ಸ್ವಾಗತಿಸಿದರು. ಸವಾಯಿ ಗಂಧರ್ವ ಸಂಗೀತ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಹಾನಗಲ್ ವಂದಿಸಿದರು.