ತುಮಕೂರು: ಬಿಜೆಪಿಯ ಡಬಲ್ ಇಂಜಿನ್ ಸರಕಾರದ ದುರಾಡಳಿತ ನೀತಿಗಳನ್ನು ಮನೆ ಮನೆಗೆ ತಿಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ವತಿಯಿಂದ ಜ.24ಕ್ಕೆ ಪ್ರಜಾಧ್ವನಿ ಬಸ್ಯಾತ್ರೆ ಕೈಗೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯ ಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಗೆಲುವು ಸಾಧಿಸ ಲಿದೆ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತ ರು ಮಾಡಬೇಕೆಂದು ಮನವಿ ಮಾಡಿದರು.
ಈಗಾಗಲೇ ಚಿತ್ರದುರ್ಗದಲ್ಲಿ ನಡೆದ ಐಕ್ಯತಾ ಸಮಾವೇಶ ಮತ್ತು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಇಡೀ ರಾಜ್ಯಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ.ಅದೇ ರೀತಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸಂದೇಶವನ್ನು ತುಮಕೂರಿನಿಂದಲೇ ಕಳುಹಿಸುವ ಕೆಲಸ ಆಗಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಜಾಧ್ವನಿ ಬಸ್ ಯಾತ್ರೆ ಹಮ್ಮಿಕೊಂಡಿದ್ದೇವೆ.ಈ ಬಾರಿಯೂ ಸಹ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ನೀಡಲಿದ್ದಾರೆ ಎಂಬ ನಂಬಿಕೆ ನಮಗಿದೆ.
ಹಾಗಾಗಿ ಕಾಂಗ್ರೆಸನ ಕಾರ್ಯಕ್ರಮಗಳು, ಬಿಜೆಪಿಯ ದುರಾಡಳಿತವನ್ನು ಜನತೆಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು, ಅದರಲ್ಲಿಯೂ ನಾ ನಾಯಕಿ ಕಾರ್ಯಕ್ರಮದ ಮೂಲಕ ಸ್ಪೂರ್ತಿ ಪಡೆದ ಮಹಿಳಾ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ತಿಳಿಸಿದರು.
ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ವಿಧಾನಸೌಧ ಮತ್ತು ವಿಕಾಸಸೌಧದ ಪ್ರತಿ ಕಂಬವೂ ಶೇ.40 ಕಮಿಷನ್ ಬಗ್ಗೆ ಹೇಳುತ್ತದೆ. ಐಕ್ಯತಾ ಸಮಾವೇಶದಲ್ಲಿ ನೀಡಿದ ಘೋಷಣೆಯಂತೆ 1-5ನೇ ತರಗತಿಯ ಮಕ್ಕಳಿಗೆ ಮಾಸಿಕ 150 ರೂ, 6 ರಿಂದ 10 ತರಗತಿ ಯವರೆಗಿನ ಮಕ್ಕಳಿಗೆ ತಲಾ 300 ರು.ಗಳನ್ನು ನೀಡುವ ಭರವಸೆ ನೀಡಲಾಗಿದೆ.
ನಾ ನಾಯಕಿ ಸಮಾವೇಶದಲ್ಲಿ ಪ್ರತಿ ಕುಟುಂಬದ ಮಹಿಳೆಗೆ 2000 ರು. ಮಾಸಿಕ ನಗದು, ಹಾಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಘೋಷಣೆಗಳನ್ನು ಮಾಡಿದೆ.ಈ ಘೋಷಣೆಗಳಿಗಾಗಿ ವಾರ್ಷಿಕ 24 ಸಾವಿರ ಕೋಟಿ ರು.ಗಳು ಬೇಕಾಗುತ್ತವೆ. ಹಣವನ್ನು ತರುವ ದಾರಿ ನಮಗೆ ತಿಳಿದಿದೆ.ಹಾಗಾಗಿಯೇ ಈ ಘೋಷಣೆ ಮಾಡಿದ್ದೇವೆ. ಇದನ್ನು ಪ್ರತಿ ಮನೆಗೂ ತಲುಪಿಸಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮತ್ತು ಮಾಜಿ ಶಾಸಕ ಕೆ.ಷಡಕ್ಷರಿ, ರಫೀಕ್ ಅಹಮದ್, ಜಿಲ್ಲಾ ಉಸ್ತುವಾರಿಗಳಾದ ಮಂಜುಳಾ ನಾಯ್ಡು, ವೇಣುಗೋಪಾಲ್,ಎಂ.ಎಲ್.ಸಿ. ಗೋವಿಂದರಾಜು ಅವರುಗಳು ಪ್ರಜಾಧ್ವನಿ ಬಸ್ ಯಾತ್ರೆ ಯಶಸ್ವಿಗೊಳಿಸುವ ಕುರಿತು ಪಕ್ಷದ ಮುಖಂಡರಿಗೆ ಸಲಹೆ ಸೂಚನೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಮಾಜಿ ಸಂಸದ ಚಂದ್ರಪ್ಪ,ಮಾಜಿ ಶಾಸಕ ಎಸ್.ಷಪಿಅಹಮದ್, ಲಕ್ಕಪ್ಪ,ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ರಾಯಸಂದ್ರರವಿಕುಮಾರ್,ಸಹ ಸಂಚಾಲಕ ಇಕ್ಬಾಲ್ ಅಹಮದ್,ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಗೀತಾರಾಜಣ್ಣ, ಮುಖಂಡರಾದ ಲೋಕೇಶ್ವರ್,ಟಿ.ಜಿ.ಲಿಂಗರಾಜು, ಕೇಶವಮೂರ್ತಿ, ಮರಿಚನ್ನಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.