Thursday, 21st November 2024

Prajwal revanna Case: ಪ್ರಜ್ವಲ್‌ ರೇವಣ್ಣ ತೋಟದ ಮನೆಯಲ್ಲಿದ್ದ ಸೀರೆ, ಪೆಟಿಕೋಟ್‌ನಲ್ಲಿ ವೀರ್ಯ, ಕೂದಲು: ಯಾರದಿದು?

prajwal revanna case

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal revanna Case) ಪ್ರಕರಣದಲ್ಲಿ, ಅವರ ತೋಟದ (Farm house) ಮನೆಯಲ್ಲಿ ಸಿಕ್ಕಿದ ಸೀರೆಗಳು, ಪೆಟಿಕೋಟ್‌ಗಳು, ಬೆಡ್‌ಶೀಟ್‌ನಲ್ಲಿ ವೀರ್ಯದ ಕಲೆಗಳು ಹಾಗೂ ಕೂದಲು ಪತ್ತೆಯಾಗಿದ್ದು, ಇವುಗಳ ಡಿಎನ್‌ಎ ಪರೀಕ್ಷೆಗೆ (DNA test) ಎಸ್‌ಐಟಿ (SIT) ಮುಂದಾಗಿದೆ. ಇದು ಪ್ರಜ್ವಲ್‌ ರೇವಣ್ಣದು ಎಂದು ಖಚಿತವಾದರೆ ಅವರಿಗೆ ಸಂಕಷ್ಟ ಕಾದಿದೆ.

ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧದ ಕಾನೂನಿನ ಕುಣಿಕೆ ಬಿಗಿಗೊಳಿಸಲು ಮುಂದಾಗಿರುವ ವಿಶೇಷ ತನಿಖಾ ತಂಡ, ಆರೋಪಿಯನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿದೆ. ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ನ್ಯಾಯಾಲಯಕ್ಕೆ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಡಿಎನ್‌ಎ ಪರೀಕ್ಷೆ ವಿಚಾರ ಬೆಳಕಿಗೆ ಬಂದಿದೆ. ವೈದ್ಯಕೀಯ ಪರೀಕ್ಷಾ ವರದಿಯೂ ಬಾಕಿಯಿದ್ದು, ಆ ವರದಿ ಬಂದ ನಂತರ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವುದಾಗಿ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ ನೀಡಿದೆ.

ಅತ್ಯಾಚಾರ ಪ್ರಕರಣದ ಸಂತ್ರಸ್ತೆಯರಿಂದ ಬಟ್ಟೆಗಳನ್ನು ಪರೀಕ್ಷೆಗೆ ಪಡೆಯಲಾಗಿದೆ. ಈ ಕೃತ್ಯಗಳು ನಡೆದಿದೆ ಎನ್ನಲಾದ ಹಾಸನದ ಸಂಸದರ ಅತಿಥಿ ಗೃಹ, ಪ್ರಜ್ವಲ್‌ ಅವರ ಹೊಳೆನರಸೀಪುರ ಮತ್ತು ಬೆಂಗಳೂರಿನ ಬಸವನಗುಡಿ ಮನೆ ಹಾಗೂ ತೋಟದ ಮನೆಗಳಲ್ಲಿ ಬೆಡ್‌ ಶೀಟ್‌, ಪೆಟಿಕೋಟ್‌, ಸಂತ್ರಸ್ತೆಯರ ಸೀರೆ ಸೇರಿ ಕೆಲ ಬಟ್ಟೆಗಳನ್ನು ಎಸ್‌ಐಟಿ ಜಪ್ತಿ ಮಾಡಿತ್ತು. ಇವುಗಳಲ್ಲಿ ಪತ್ತೆಯಾದ ಕೂದಲು ಹಾಗೂ ವೀರ್ಯದ ಡಿಎನ್‌ಎ ಪರೀಕ್ಷೆ ನಡೆಸಿ ಅದನ್ನು ಪ್ರಜ್ವಲ್‌ ಡಿಎನ್‌ಎ ಪರೀಕ್ಷೆಗೆ ಹೋಲಿಕೆ ಮಾಡಲಾಗುತ್ತಿದೆ.

ಡಿಎನ್‌ಎ ವಿಶ್ಲೇಷಣೆಗೆ ಸಂತ್ರಸ್ತೆಯರು ಹಾಗೂ ಪ್ರಜ್ವಲ್ ಅವರಿಂದ ರಕ್ತ ಮಾದರಿ ಹಾಗೂ ಕೂದಲನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಎಸ್ಐಟಿ ಕಳುಹಿಸಿದ್ದು, ಶೀಘ್ರದಲ್ಲೇ ಅಂತಿಮ ವರದಿ ಬರಲಿದೆ. ಈ ವರದಿಯಲ್ಲಿ ಸಾಮ್ಯತೆ ಕಂಡು ಬಂದರೆ ಪ್ರಜ್ವಲ್‌ರವರಿಗೆ ಸಂಕಷ್ಟವಿದೆ. ಅತ್ಯಾಚಾರ ಕೃತ್ಯ ಸಾಬೀತಿಗೆ ಎಸ್ಐಟಿಗೆ ಇದು ಬಹುಮುಖ್ಯವಾದ ವೈಜ್ಞಾನಿಕ ಸಾಕ್ಷ್ಯವಾಗಲಿದೆ. ಪ್ರಜ್ವಲ್‌ ಇದೀಗ ಅತ್ಯಾಚಾರ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮನೆ ಮತ್ತು ತೋಟದ ಮನೆಗಳು, ಹಾಸನ ನಗರದ ಸಂಸದರ ಅತಿಥಿ ಗೃಹ ಹಾಗೂ ಬೆಂಗಳೂರಿನ ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೆ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ ಇಬ್ಬರು ಮನೆಗೆಲಸದವರ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಪ್ರಜ್ವಲ್ ವಿರುದ್ಧ ಆರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ.

ಈ ಎರಡು ಪ್ರಕರಣಗಳ ಆರೋಪಪಟ್ಟಿಯಲ್ಲಿ ತೋಟದ ಮನೆ ಹಾಗೂ ಹೊಳೆನರಸೀಪುರ ಮತ್ತು ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ಕೃತ್ಯ ನಡೆದಿವೆ ಎಂಬ ಸಂಗತಿ ಉಲ್ಲೇಖವಾಗಿದೆ. ಹೀಗಾಗಿ ಈ ಕೃತ್ಯದ ಸ್ಥಳಗಳಲ್ಲಿ ಪತ್ತೆಯಾದ ಬಟ್ಟೆಗಳು, ಹೊದಿಕೆ ಹಾಗೂ ಇತರೆ ವಸ್ತುಗಳು ಕೃತ್ಯದ ರುಜುವಾತುಪಡಿಸಲು ಎಸ್‌ಐಟಿ ಮಹತ್ವದ ಕುರುಹು ನೀಡಿವೆ ಎನ್ನಲಾಗಿದೆ.

ಹಾಸನ ಪೆನ್‌ ಡ್ರೈವ್ ಹಗರಣ ಸಂಬಂಧ ಎಸ್‌ಐಟಿ ರಚನೆಯಾದ ಕೂಡಲೇ ಪ್ರಜ್ವಲ್‌ ರೇವಣ್ಣರವರ ಮನೆ, ಅತಿಥಿ ಗೃಹ ಹಾಗೂ ತೋಟದ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಪ್ರಜ್ವಲ್‌ ರವರ ಕೋಣೆಯಲ್ಲಿದ್ದ ಹಾಸಿಗೆ, ದಿಂಬು, ಬಟ್ಟೆಗಳು, ಟವಲ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದರು. ಅಲ್ಲದೆ ಸಂತ್ರಸ್ತೆಯರಿಂದ ಸಹ ಸೀರೆಗಳನ್ನು ಕೂಡ ಎಸ್‌ಐಟಿ ವಶಪಡಿಸಿಕೊಂಡಿತ್ತು. ಇವುಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು.

ಈ ಸುದ್ದಿ ಓದಿ: Prajwal revanna case: 60ರ ವೃದ್ಧೆಯ ಮೇಲೂ ಪೌರುಷ ತೋರಿದ ಪ್ರಜ್ವಲ್‌ ರೇವಣ್ಣ! ಕೈಮುಗಿದು ಬೇಡಿದರೂ ಬಿಡದೆ ವಿಡಿಯೋ