Friday, 22nd November 2024

ನನ್ನ ಟಿಕೆಟ್ ಬಗ್ಗೆ ತಾಯಿ ಚಾಮುಂಡೇಶ್ವರಿ ನಿರ್ಧರಿಸುತ್ತಾಳೆ: ಸಂಸದ ಪ್ರತಾಪ್ ಸಿಂಹ

ಬೆಂಗಳೂರು: ಸಂಸದ ಪ್ರತಾಪ್ ಸಿಂಹ, ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ನಿರ್ಧಾರ ಮಾಡುತ್ತಾಳೆ ಎಂದು ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ  ಟಿಕೆಟ್ ಕೈ ತಪ್ಪುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿವೆ.

ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುತ್ತಿರುವ ಸಮಯದಲ್ಲಿಯೇ ಫೇಸ್ ಬುಕ್ ಲೈವ್ ನಲ್ಲಿ ಕಾಣಿಸಿಕೊಂಡ ಪ್ರತಾಪ್ ಸಿಂಹ, 1989ರಿಂದ ಮೈಸೂರಿನಲ್ಲಿ ಸತತವಾಗಿ ಎರಡನೇ ಸಲ ಯಾರನ್ನೂ ಗೆಲ್ಲಿಸಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ಅವರ ಮನೆ ಬಾಗಿಲು ಕಾಯುವವರು ಬೇಕು. ಮೈಸೂರಿನಲ್ಲಿ ಎರಡು ಬಾರಿ ರಾಜವಂಶಸ್ಥರನ್ನು ಸೋಲಿಸಿದ್ದಾರೆ. ಆದರೆ 40 ವರ್ಷಗಳಲ್ಲಿ ನನ್ನೊಬ್ಬನನ್ನು ಮಾತ್ರ ಸತತ ಎರಡು ಬಾರಿ ಗೆಲ್ಲಿಸಿದ್ದಾರೆ. ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ನಿರ್ಧಾರ ಮಾಡುತ್ತಾಳೆ. ಆ ತಾಯಿಗೆ ಬಿಟ್ಟಿದ್ದೇನೆ. ಟಿಕೆಟ್ ನನಗೆ ಕೊಟ್ಟರೆ ನಾನು 3 ಲಕ್ಷ ಅಂತರದಿಂದ ಗೆಲ್ಲುತ್ತೇನೆ. ಕಾರ್ಯಕರ್ತರು ನನ್ನ ಪರ ನಿಂತಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ದ್ವೇಷ ಅಸೂಯೇ ಸಹಜ. ನನ್ನ ಕೆಲಸ ನೋಡಿ ಜನ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲಕ್ಕೆ ನಿಂತಿದ್ದಾರೆ ನನಗಷ್ಟು ಸಾಕು. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟಿದ್ದೀರಿ. 28 ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಎಂಪಿ ಪರವಾಗಿ ಜನ ನಿಂತಿಲ್ಲ. ನನ್ನ ಪರವಾಗಿ ನಿಂತಿದ್ದಾರೆ.

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಗೆ ಬೇಕೋ, ಹಾಗೇ ಆಯಾ ಕ್ಷೇತ್ರಕ್ಕೆ ಒಬ್ಬೊಬ್ಬ ಛೋಟಾ ಮೋದಿ ಬೇಕು ಅಂತಾ ಬಯಸುತ್ತಾರೆ. ದೇವರು ಆಶೀರ್ವಾದ ಇದ್ದರೆ ಮೂರನೇ ಬಾರಿಗೆ ನಿಮ್ಮ ಸೇವೆ ಮಾಡುತ್ತೇನೆ. ಕೊಡಗಿಗೆ ಎರಡು ಅವಧಿಯಲ್ಲಿ ಸ್ವಲ್ಪ ಕಡಿಮೆ ಕೆಲಸ ಮಾಡಿದ್ದೆ. ಕೊಡಗಿನ ಋಣ ತೀರಿಸಬೇಕಿದೆ. ಆ ಕೆಲಸವನ್ನು ಮೂರನೇ ಬಾರಿಯ ಅವಧಿಯಲ್ಲಿ ಮಾಡುತ್ತೇನೆ. ಮೈಸೂರಿಗೆ ಅತಿ ಹೆಚ್ಚಿನ ಕೆಲಸ ಮಾಡಿರುವುದಾಗಿ ತಿಳಿಸಿದರು.