ಸಿರವಾರ: ಪ್ರತಿಯೊಬ್ಬರೂ ದೇಶದ ಬಗ್ಗೆ ಅಭಿಮಾನ ಇಟ್ಟುಕೊಂಡು ಸೇವೆಯಲ್ಲಿ ಪಾಲ್ಗೊಳ್ಳಬೇಕಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತತ್ವಾದರ್ಶ ಗಳನ್ನು ಪಾಲಿಸಬೇಕು ಎಂದು ತಾಲೂಕಿನ ಸಣ್ಣಹೊಸೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜಗೌಡ ಅತ್ತನೂರು ಸಲಹೆ ನೀಡಿದರು.
ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಐಕ್ಯತೆಗೆ ಧಕ್ಕೆಯಾದರೆ ಎಲ್ಲರೂ ಒಗ್ಗೂಡುವುದು ಅಗತ್ಯ. ಅದ್ದೂರಿಯಾಗಿ ನಡೆದ ಗಣರಾಜ್ಯೋತ್ಸವ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಿಕ್ಷಕರ ಶ್ರಮ, ಗ್ರಾಮಸ್ಥರ ಸಹಕಾರ ಕಾರಣ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿ ನಭಿ ಹಾಗೂ ಶಿಕ್ಷಕರಾದ ಗಂಗಾರಾಣಿ, ಅಂಬಿಕಾ, ಚಂದ್ರಿಕಾ, ಶಶಿಕಲಾ, ರೇಣುಕಾ ಅವರು ಮಕ್ಕಳಿಗೆ ನೃತ್ಯ ತರಬೇತಿ ನೀಡಿದ್ದಕ್ಕಾಗಿ ಅವರನ್ನು ಅಭಿನಂದಿಸಿ ದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮತದಾನ ದಿನಾಚರಣೆ ಅಂಗವಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಣ್ಣಹೊಸೂರು ಗ್ರಾಮದ ರವಿಚಂದ್ರನ್ ಹಾಗೂ ಮಾಡಗಿರಿ ಶಾಲೆಯ ವಿದ್ಯಾರ್ಥಿನಿ ನಿಂಗಮ್ಮ ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಹಿರಿಯ ಮುಖಂಡರಾದ ಶರಣಪ್ಪಗೌಡ ಅವರು ರಾಷ್ಟ್ರಪಿತ ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ನಾಗಪ್ಪ ಮಾತನಾಡಿ, ಅದ್ದೂರಿ ಗಣರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಗೆ ಎಸ್ಡಿಸಿಎಂ, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕರು, ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು. ಶಾಲೆಯ ಶಿಕ್ಷಕರಾದ ಚಂದ್ರಿಕಾ ಮತ್ತು ಅಂಬಿಕಾ ನಿರೂಪಿಸಿದರು. ಎಸ್ಡಿಎಂಸಿ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಶಿವಪ್ಪಗೌಡ ಅತ್ತನೂರು, ಬಸವರಾಜಗೌಡ, ಬಾಲಪ್ಪ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.