Saturday, 14th December 2024

Privatization: ವಿದ್ಯುತ್ ಖಾಸಗೀಕರಣ ಬೇಡ, ಕುಸುಮ್ ಯೋಜನೆಯಲ್ಲಿ ೧೦ ಹೆಚ್‌ಪಿ ಮಿತಿ ಕೈಬಿಡಿ ಎಂದು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

ಚಿಕ್ಕಬಳ್ಳಾಪುರ : ವಿದ್ಯುತ್ ಖಾಸಗೀರಣ ಬೇಡ, ಕುಸುಮ್ ಬಿ ಯೋಜನೆಯಡಿ ೧೦ಹೆಚ್‌ಪಿ ಮಿತಿ ಕೈಬಿಡಿ, ಕೃಷಿ ಪಂಪ್‌ಸೆಗಳ ಆರ್‌ಆರ್ ನಂಬರ್‌ಗೆ ಆಧಾರ್ ಜೋಡಣೆ ಮಾಡುವ ನಿರ್ಧಾರ ತಪ್ಪು, ರೈತರ ಬೋರ್‌ವೆಲ್‌ಗಳಿಗೆ ಹಿಂದಿನಂತೆ ರಿಯಾಯಿತಿಯಲ್ಲಿ ವಿದ್ಯುತ್ ಸಂಪರ್ಕ ಹಾಗೂ ಟಿಸಿ ಒದಗಿಸುವುದು ಸೇರಿ ಇನ್ನಿತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತಸಂಘದಿAದ ಬುಧವಾರ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ವಾಪಸಂದ್ರದ ರೈತಸಂಘದಿಂದ ಬಿಬಿ ರಸ್ತೆಯಲ್ಲಿ ಸಾಗಿಬಂದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಮುಖಂಡರು ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಸರಕಾರ ಮತ್ತು ಇಂದನ ಸಚಿವರ ವಿರುದ್ಧ ಘೋಷಣೆ ಕೂಗಿದರಲ್ಲದೆ ನ್ಯಾಯಕ್ಕಾಗಿ ಸರಕಾರವನ್ನು ಒತ್ತಾಯಿಸಿದರು.

ಬೆಸ್ಕಾಂ ಕಚೇರಿ ಎದುರು ನಡೆಸಿದ ಪ್ರತಿಭಟನೆ ಉದೇಶಿಸಿ ಮಾತನಾಡಿದ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಮಾರುಕಟ್ಟೆಯಲ್ಲಿ ಬೆಳೆಗಳ ಬೆಲೆಗಳಲ್ಲಿ ಉಂಟಾಗುತ್ತಿರುವ ಏರಿಳಿತ ಹಾಗೂ ಪ್ರಕೃತಿ ವಿಕೋಪಗಳಿಂದ ರೈತರು ಬೆಳೆದಿರುವ ಬೆಳೆಗಳಿಗೆ ಹೂಡಿರುವ ಬಂಡವಾಳ ಕೂಡ ವಾಪಸ್ಸಾಗುವ ಗ್ಯಾರೆಂಟಿ ಇಲ್ಲದೆ ರೈತರು ಕಂಗಾಲಾಗಿರುವ ಹೊತ್ತಿನಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಬೆಸ್ಕಾಂ ರೈತ ವಿರೋಧಿ ನೀತಿ ಅನುಸರಿಸು ತ್ತಿದೆ ಇದಕ್ಕೆ ಅಖಂಡ ರೈತರ ವಿರೋಧವಿದೆ ಎಂದು ಕಿಡಿಕಾರಿದರು.

ದೇಶಕ್ಕೆ ಆಹಾರ ಭದ್ರತೆ ಒದಗಿಸುವ ಬಹುದೊಡ್ಡ ಶಕ್ತಿಯಾದ ರೈತರನ್ನು ವಿದ್ಯುತ್ ಖಾಸಗಿಕರಣ ಮಾಡುವ ಮೂಲಕ ಹಲವು ಬೋರ್‌ವೆಲ್‌ಗೆ ವಿದ್ಯುತ್ ಪಡೆಯಲು ಹತ್ತು ಹಲವು ಷರತ್ತುಗಳನ್ನು ವಿಧಿಸಿ ರೈತರನ್ನು ಬೀದಿ ಪಾಲು ಮಾಡಲು ಹೊರಟಿರುವುದು ತರವಲ್ಲ ಇದಕ್ಕೆ ನಮ್ಮ ಖಂಡನೆಯಿದೆ ಎಂದು ಹೇಳಿದರು.

ಕೃಷಿ ಪಂಪ್‌ಸೆಗಳ ಆರ್‌ಆರ್ ನಂಬರ್‌ಗೆ ಆಧಾರ್ ಜೋಡಣೆ ಮಾಡಿಸಬೇಕೆಂಬ ಆದೇಶವು ರೈತ ಕುಟುಂಬದಲ್ಲಿ ಜಗಳ, ವೈಷಮ್ಯಗಳಿಗೆ ಕಾರಣವಾಗಿದೆ. ಈ ಆಧಾರ್ ಜೋಡಣೆಯಿಂದ ರೈತರಿಗೆ ಆಗುವ ಉಪಯೋಗಗಳು ಏನೂ ಇಲ್ಲ. ಆದರೆ ಮೀಟರ್ ಅಳವಡಿಸಿ ವಿದ್ಯುತ್ ಇಲಾಖೆಯನ್ನು ಸಂಪೂರ್ಣ ಖಾಸಗೀಕರಣ ಮಾಡುವ ಹುನ್ನಾರ ವನ್ನು ರಾಜ್ಯಸರ್ಕಾರ ನಡೆಸುತ್ತಿದೆ ಎಂದು ದೂರಿದರು.

ಗ್ಯಾರೆಂಟಿ ಯೋಜನೆ ಮೂಲಕ ಜನತೆಗೆ ನೀಡುತ್ತಿರುವ ಉಚಿತ ವಿದ್ಯುತ್ ಎಂಬುದು ಮೋಸದ ಯೋಜನೆಯಾಗಿದೆ. ಇದೀಗ ಪ್ರತಿ ಗ್ರಾಹಕರಿಗೆ ವರ್ಷಕ್ಕೆ ಠೇವಣಿ ಹೆಸರಿನಲ್ಲಿ ಸಾವಿರಾರು ರೂ ಸಂಗ್ರಹಿಸಲು ಹೊರಟಿದೆ. ಪಂಚಭಾಗ್ಯಗಳ ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಹೊಡೆಯುತ್ತಿದೆ. ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆಗಳನ್ನು ಕೈಬಿಡದೇ ಇದ್ದಲ್ಲಿ ೨೦೦೧ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದ ವಿರುದ್ಧ ನಡೆದ ಬೃಹತ್ ಹೋರಾಟಗಳನ್ನು ಮತ್ತೊಮ್ಮೆ ರೂಪಿಸ ಲಾಗುವುದು, ಮುಂಬರುವ ಚುನಾವಣೆಗಳಲ್ಲಿ ಬೆನ್ನುಮೂಳೆ ಮುರಿಯಲಾಗುವುದು ಎಂದು ಎಚ್ಚರಿಸಿದರು.

ಆರ್‌ಆರ್ ನಂಬರ್‌ಗೆ ಆಧಾರ್ ಜೋಡಣೆ ಮಾಡುವುದನ್ನು ಕೂಡಲೇ ಕೈಬಿಡಬೇಕು, ೨೦೨೩ಕ್ಕೂ ಹಿಂದಿನ ರೀತಿ ಯಲ್ಲಿ ಇದ್ದ ಕಾನೂನಿನಂತೆ ಕೃಷಿ ಕೊಳವೆ ಬಾವಿಗಳಿಗೆ ವಿದ್ಯುತ್, ಕಂಬ, ವಯರ್, ಪರಿವರ್ತಕ ಇನ್ನೂ ಮುಂತಾದ ಸಲಕರಣೆಗಳ ವೆಚ್ಚ ಇಲಾಖೆಯೇ ಭರಿಸಬೇಕು. ಅಂತರದ ತಾರತಮ್ಯವಿಲ್ಲದೆ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು, ನಿತ್ಯ ೧೦ಗಂಟೆ ೩ಫೇಸ್ ವಿದ್ಯುತ್ ನೀಡಬೇಕು, ಕೃಷಿ ವಲಯಕ್ಕೆ ೧೦ ಎಚ್‌ಪಿ ವರೆಗೆ ಉಚಿತ ವಿದ್ಯುತನ್ನು ಎಲ್ಲ ಕೊಳವೆ ಬಾವಿಗಳಿಗೆ ನೀಡಬೇಕು, ಕುಸುಮ್ ಬಿ ಸೋಲಾರ್ ಯೋಜನೆ ಎಲ್ಲ ರೈತರಿಗೆ ಒದಗಿಸ ಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕೆಂದು ಒತ್ತಾಯಿಸಿದರು.

ಬೇಡಿಕೆ ಈಡೇರಿಕಾಗಿ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೈತರು ಕಚೇರಿ ಆಚರಣದಲ್ಲಿಯೇ ಒಲೆಇಟ್ಟು ಅಡಿಗೆ ಮಾಡಿ ಬಿಸಿ ಅನ್ನದೊಂದಿಗೆ ಹುಣಸೆಹಣ್ಣಿನ ಹುಳಿಗೊಜ್ಜನ್ನು ತಿನ್ನುವ ಮೂಲಕ ಅಧಿಕಾರಿಗಳಿಗೆ ರೈತರ ಕಷ್ಟವನ್ನು ಮನವರಿಕೆ ಮಾಡಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿಗಳು ಮನವಿ ಸ್ವೀಕರಿಸಿ ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್ಸು ಮಾಡಲಾಯಿತು..

ಸಂಘದ ಜಿಲ್ಲಾಧ್ಯಕ್ಷ ರಾಮನಾಥರೆಡ್ಡಿ, ವೇಣುಗೋಪಾಲ್, ವೀರಾಪುರ ಮುನಿನಂಜಪ್ಪ, ರಾಮಾಂಜಿನಪ್ಪ, ನೆಲಮಾಕನಹಳ್ಳಿ ಗೋಪಾಲ್, ತಾದೂರು ಮಂಜುನಾಥ್, ಹಿತ್ತಲಹಳ್ಳಿ ರಮೇಶ್, ರಮಣರೆಡ್ಡಿ, ಸೋಮು, ಬಿ.ನಾರಾಯಣಸ್ವಾಮಿ, ಲಕ್ಷ್ಮಣ್‌ರೆಡ್ಡಿ, ರಾಮಕೃಷ್ಣಪ್ಪ, ಕುಪ್ಪಳ್ಳಿ ಶ್ರೀನಿವಾಸ್, ಜಾತವಾರಮುನಿರಾಜು, ಅಶ್ವತ್ಥಪ್ಪ, ಮಹೇಶ, ರಾಮಚಂದ್ರಪ್ಪ ಸುಂದ್ರಹಳ್ಳಿ ಬೀರಪ್ಪ, ಕನ್ನಮಂಗಲ ನಾಗರಾಜು, ಪಿ.ವಿ.ದೇವರಾಜ್, ಬುಸ್ಸನಹಳ್ಳಿ ದೇವರಾಜ್,ಚೀಮಂಗಲ ಬಸವರಾಜು ಮತ್ತಿತರರು ಇದ್ದರು.