Sunday, 24th November 2024

ನಿಮ್ಮವರೇ ಆದ ಪ್ರೊ. ರಾಜೀವ್‌ಗೌಡರನ್ನು ಗೆಲ್ಲಿಸಿ, ಬಿಜೆಪಿಯ ಶೋಭಾ ಕರಂದ್ಲಾಜೆಯನ್ನು ತಿರಸ್ಕರಿಸಿ: ಡಿ.ಕೆ.ಶಿವಕುಮಾರ್‌

ಬೆಂಗಳೂರು: ಉಡುಪಿ-ಚಿಕ್ಕಮಗಳೂರಿನ ಜನರು ತಿರಸ್ಕರಿದ ಬಿಜೆಪಿಯ ಶೋಭಾ ಕರಂದ್ಲಾಜೆಯನ್ನು ಬೆಂಗಳೂರು ಉತ್ತರದ ಜನರು ಸಹ ತಿರಸ್ಕರಿಸಿ, ಮುಖಭಂಗ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಪ್ರೊ. ಎಂ.ವಿ. ರಾಜೀವ್ ಗೌಡ ಅವರ ಪರವಾಗಿ ಇಂದು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ ಅವರು ಬಿರುಸಿನ ಪ್ರಚಾರ ನಡೆಸಿದರು, ಈ ವೇಳೆ ಮಾತನಾಡಿದ ಅವರು, ಕೇಂದ್ರದಲ್ಲಿ ಮಂತ್ರಿಯಾಗಿದ್ದರೂ ಸಹ ಶೋಭಾ ಕರಂದ್ಲಾಜೆ ನಯಾಪೈಸೆಯ ಅಭಿವೃದ್ಧಿ ಕೆಲಸ ಮಾಡಲಿಲ್ಲ, ಅಲ್ಲಿನ ಜನರೇ ನೀವು ನಮಗೆ ಬೇಡ ಎಂದು ಪ್ರತಿಭಟಿಸಿ ಶೋಭಾ ಕರಂದ್ಲಾಜೆಯನ್ನು ಕ್ಷೇತ್ರದಿಂದ ಹೊರಗಟ್ಟಿದ್ದಾರೆ, ಅಂಥವರನ್ನು ತಂದು ಬೆಂಗಳೂರು ಉತ್ತರದಲ್ಲಿ ನಿಲ್ಲಿಸಿದ್ದಾರೆ. ಆದರೆ, ಈ ಕ್ಷೇತ್ರದ ಜನರು ಬುದ್ದಿವಂತರು, ಯಾರಿಗೂ ಬೇಡದ ಬಿಜೆಪಿ ಅಭ್ಯರ್ಥಿಯನ್ನ ಮತ್ತೆ ಆಯ್ಕೆ ಮಾಡಲು ನಮ್ಮ ಜನ ದಡ್ಡರಲ್ಲ. ಮತದಾನದ ದಿನದಂದು ಕಾಂಗ್ರೆಸ್‌ನ ಪ್ರೊ.ಎಂ.ವಿ. ರಾಜೀವ್‌ ಗೌಡ ಅವರಿಗೆ ಮತ ಹಾಕುವ ಮೂಲಕ ಶೋಭಾ ಕರಂದ್ಲಾಜೆ ಯನ್ನು ಸೋಲಿಸಬೇಕು ಎಂದು ಕರೆಕೊಟ್ಟರು.

ಬಿಜೆಪಿಗೆ ಈ ಬಾರಿ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೇ ಅವರದೇ ಪಕ್ಷದ ೧೨ ಎಂಪಿಗಳಿಗೆ ಈ ಬಾರಿ ಟಿಕೆಟ್‌ ನೀಡಿಲ್ಲ, ಸೋಲು ಭಯ ಅವರನ್ನು ಕಾಡುತ್ತಿದೆ. ಹೀಗಾಗಿಯೇ ಜನರು ಸಹ ಬಿಜೆಪಿಯನ್ನು ಸೋಲಿ ಕಾಂಗ್ರೆಸ್‌ ಕೈ ಹಿಡಿಬೇಕು. ರಾಜೀವ್‌ ಗೌಡ ಅವರು ಪ್ರೊಫೆಸರ್‌ ಆಗಿದ್ದವರು, ಅವರಿಗೆ ಮತದಾರರ ಮಿಡಿತ ಅರ್ಥವಾಗಲಿದೆ, ಹೀಗಾಗಿ ಎಲ್ಲರೂ ರಾಜೀವ್‌ ಗೌಡ ಅವರನ್ನೇ ಗೆಲ್ಲಿಸಿ ಎಂದರು.

ಇನ್ನು, ಈ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಹುಸಿ ಸುಳ್ಳುಗಳಿಂದಲೇ ಜನರನ್ನು ಯಾಮಾರಿ ಸುತ್ತಾ ಬಂದಿದೆ, ಪ್ರತಿಯೊಬ್ಬರ ಖಾತೆಗೂ ೧೫ ಲಕ್ಷ ಹಾಕುತ್ತೇವೆ, ಎಲ್ಲರೂ ಜನ್‌ಧನ್‌ ಖಾತೆ ತೆರೆಯಿರಿ ಎಂದರು, ೧೫ ಲಕ್ಷವಲ್ಲ ೧೫ ಪೈಸೆ ಸಹ ಖಾತೆಗೆ ಬೀಳಲಿಲ್ಲ ಎಂದು ಲೇವಡಿ ಮಾಡಿದರು.

ಈಗಾಗಲೇ ಕಾಂಗ್ರೆಸ್‌ ನುಡಿದಂತೆ ನಡೆಯುತ್ತೇವೆ ಎಂಬುದನ್ನು ಉಚಿತ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನಿರೂಪಿಸಿದ್ದೇವೆ, ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ, ವರ್ಷಕ್ಕೆ ಎಲ್ಲಾ ಮಹಿಳೆಯರಿಗೆ ೧ ಲಕ್ಷ ರೂ. ಹಣ, ೨೫ ಸಾವಿರ ಉಚಿತ ಆರೋಗ್ಯ ವಿಮೆ, ಶಿಕ್ಷಣ ಪಡೆದ ನಿರುದ್ಯೋ ಗಿಗಳಿಗೆ ಉಚಿತ ತರಬೇತಿ ಹಾಗೂ ೧ ಲಕ್ಷ ರೂ.ವರೆಗೆ ಗೌರವಧನ ನೀಡಲು ಮುಂದಾಗಿದ್ದೇವೆ, ಹೀಗಾಗಿ ಜನಸಾಮಾನ್ಯರು ನಮ್ಮ ಪಕ್ಷವನ್ನೇ ಬೆಂಬಲಿಸ ಬೇಕು ಎಂದು ಮನವಿ ಮಾಡಿದರು.

ಬಾಗಲಗುಂಟೆ ಮಾರಮ್ಮ ದೇವಸ್ಥಾನದಲ್ಲಿ ದೇವರ ಆಶೀರ್ವಾದ ಪಡೆದು, ರ್ಯಾಲಿ ಪ್ರಾರಂಭಿಸಿದರು. ನಂತರ ಮಲ್ಲಸಂದ್ರ ರಸ್ತೆ, ಪೈಪ್‌ಲೈನ್‌ ರಸ್ತೆ, ದಾಸರಹಳ್ಳಿ ಮುಖ್ಯರಸ್ತೆ, ಕೆರೆ ಮುಖ್ಯರಸ್ತೆ ಭಾಗದಲ್ಲಿ ರ್ಯಾಲಿ ತೆರಳಿ, ಜನಸಾಮಾನ್ಯರ ಬಳಿ ಮತಯಾಚಿಸಿದರು.