ತುಮಕೂರು: ವಿದ್ಯಾರ್ಥಿ ಜೀವನದಲ್ಲೇ ದೊಡ್ಡ ಕನಸುಗಳಿರಬೇಕು. ಆ ಕನಸುಗಳನ್ನು ಭವಿಷ್ಯದಲ್ಲಿ ಸಾಧಿಸಲೇಬೇಕೆಂಬ ಹಠ, ಛಲವಿರಬೇಕು. ಆಗ ಮಾತ್ರ ಬದುಕಿನಲ್ಲಿ ಗೆಲುವು ಖಚಿತ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಮಂಗಳವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋ ತ್ಸವ ‘ಸೃಜನ-೨೦೨೩’ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಹವ್ಯಾಸ, ಅಭ್ಯಾಸಗಳು ಗುಣಮಟ್ಟ ದ್ದಾಗಿರಬೇಕು. ಇಂದಿನ ವಿದ್ಯಾರ್ಥಿಗಳೇ ದೇಶದ ನಾಳಿನ ನಂಬಿಕೆ. ಬುದ್ಧಿವಂತರೂ, ಸೃಜನಶೀಲರೂ ದೇಶಕ್ಕೆ ಆಸ್ತಿ. ಎಲ್ಲ ಎತ್ತರದ ಆಸೆಗಳನ್ನು ಈಡೇರಿಸಿಕೊಳ್ಳಲು ಸ್ಫೂರ್ತಿಯ ಅಗತ್ಯವಿದೆ. ಶಿಕ್ಷಕನ ವಿದ್ಯಾರ್ಥಿಯ ನಂಟು ಕನ್ನಡಿ ಇದ್ದಂತೆ ಎಂದರು.
ವಿಜ್ಞಾನ ವಿದ್ಯಾರ್ಥಿಗಳು ತಂತ್ರಜ್ಞಾನದ ಇತಿಹಾಸ ಹಾಗೂ ಪ್ರಸ್ತುತ ಮಾಹಿತಿ ತಿಳಿದುಕೊಂಡಿರಬೇಕು. ಪ್ರತಿಕ್ಷಣ ಹೊಸತನ್ನು ಕಾಣುವುದೇ ವಿಜ್ಞಾನ. ನೀವೆಲ್ಲರೂ ಪಾದರಸದಂತಿರಬೇಕು ಎಂದು ಹೇಳಿದರು.
ರಂಗಕರ್ಮಿ ಹಾಗೂ ಹಿನ್ನೆಲೆ ಗಾಯಕ ಚಿಂತನ್ ವಿಕಾಸ್ ಮಾತನಾಡಿ, ನಮ್ಮಲ್ಲಿರುವ ವಿದ್ಯೆ ಬುದ್ಧಿಯನ್ನು ಯಾವ ಕೃತಕ ಬುದ್ಧಿಮತ್ತೆಯು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಸ್ವಂತಿಕೆ ಇದ್ದಷ್ಟು ನಾವು ಎಲ್ಲದಕ್ಕೂ ತಂತ್ರಜ್ಞಾನದ ಮೊರೆ ಹೋಗುವುದನ್ನು ಕಡಿಮೆ ಮಾಡುತ್ತೇವೆ. ಹೊರ ಜಗತ್ತಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಂವಹನ, ವಿಶೇಷ ಕೌಶಲ್ಯ ಹಾಗೂ ನಮ್ಮ ಹಾವಭಾವ ಮುಖ್ಯ ಎಂದು ತಿಳಿಸಿದರು.
ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಪೋಷಕರನ್ನು ಮೊದಲು ಗೌರವಿಸಿ. ನಮ್ಮ ಬದುಕು ಇಂದು ಬೆಳಗುತ್ತಿದ್ದರೆ ಅದಕ್ಕೆ ಕಾರಣ ನಮ್ಮ ತಂದೆ ತಾಯಿ. ಅವರ ಶ್ರಮದಿಂದ ಇಂದು ನಾವು ಸುಖವಾಗಿದ್ದೇವೆ. ಶ್ರಮಕ್ಕೆ ಪ್ರತಿಫಲ ಎಂದಿಗೂ ಸಿಗುತ್ತದೆ. ನಿಮ್ಮ ಗುರಿ ಗುರು ಸ್ಪಷ್ಟವಿರಲಿ ಎಂದರು.
ವಿವಿಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕ ಡಾ. ರಾಮಕೃಷ್ಣ ಜಿ. ವಿಜ್ಞಾನ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಸಾಂಸ್ಕೃತಿಕ ಸಮಿತಿಯ ಸಂಯೋಜಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಸ್ವಾಗತಿಸಿದರು. ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ. ಚೇತನ್ ಪ್ರತಾಪ್ ಕೆ. ಎನ್. ನಿರೂಪಿಸಿದರು. ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ. ಶೇಠ್, ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ್ ಭಾಗವಹಿಸಿದ್ದರು.