Sunday, 15th December 2024

ಉಪನಿರ್ದೇಶಕಿ ಕೊಲೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ: ಸಿದ್ದರಾಮಯ್ಯ

ಮೈಸೂರು: ಬೆಂಗಳೂರಿನಲ್ಲಿ ಅಧಿಕಾರಿ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಒಬ್ಬರೇ ವಾಸವಿದ್ದರು ಎಂದು ತಿಳಿದುಬಂದಿದೆ. ಮಾಹಿತಿ ಸಂಗ್ರಹಿಸಿ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.

ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಶಾಸಕರ ಬೆಂಬಲ ನೀಡುತ್ತೇವೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ನೀವು ಬೆಂಬಲ ಕೊಡುವುದಾದರೆ ಎನ್​ಡಿಎ ಬಿಟ್ಟು ಬನ್ನಿ ಎಂದು ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದರು.

ಕಾಂತರಾಜ್ ಜನಗಣತಿ ವರದಿ ನಮ್ಮ ಕೈ ಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಎಂದರೆ ಏನು ಮಾಡಬೇಕು. ವರದಿಯಲ್ಲಿ ಏನಿದೆ ಅನ್ನೋದು ಗೊತ್ತಿಲ್ಲ, ಅಂಕಿ ಅಂಶ ಗೊತ್ತಿಲ್ಲದೆ ಆ ಬಗ್ಗೆ ಮಾತನಾಡಬಾರದು. ನವೆಂಬರ್ ಒಳಗೆ ವರದಿ ಕೊಡಬಹುದು. ಆನಂತರ ವರದಿಯಲ್ಲಿ ಏನಿದೆ? ಎಂಬುದನ್ನು ನೋಡೋಣ ಎಂದು ಸಿಎಂ ಹೇಳಿದರು.

ರಾಜ್ಯದ ಬರಪರಿಸ್ಥಿತಿಯ ಬಗ್ಗೆ ತಿಳಿಸಲು ನಮ್ಮ ರಾಜ್ಯದ ಸಚಿವರಿಗೆ ಕೇಂದ್ರ ಸಚಿವರು ಹಾಗೂ ಪ್ರಧಾನಿ ಮೋದಿ ಸಮಯ ನೀಡುತ್ತಿಲ್ಲ. ಮೂರು ದಿನ ದೆಹಲಿಯಲ್ಲಿ ನಮ್ಮ ಸಚಿವರು ಕಾದು, ಕೊನೆಗೆ ಸಚಿವರ ಕಾರ್ಯದರ್ಶಿಗಳನ್ನ ಭೇಟಿ ಮಾಡಿ ಬರುವ ಸ್ಥಿತಿ ಉಂಟಾಗಿದೆ. ಇದು ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೇಲೆ ತೋರುತ್ತಿರುವ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದರು.