Sunday, 15th December 2024

ನ.19ಕ್ಕೆ ರಾಮಲೀಲಾ ಮೈದಾನದಲ್ಲಿ ರೈತರ ಪ್ರತಿಭಟನೆ: ವಿಜಯ್ ಕುಮಾರ್

ತುಮಕೂರು: ರೈತರು ಬಳಕೆ ಮಾಡುವ ಕೃಷಿ ಪರಿಕರಗಳನ್ನು ಜಿ.ಎಸ್.ಟಿಯಿಂದ ಹೊರಗಿಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಡಿಸೆಂಬರ್ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಕಿಸಾನ್ ಸಂಘದವತಿ ಯಿಂದ ಬೃಹತ್ ರೈತರ ಘರ್ಜನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಭಾರತೀಯ ಕಿಸಾನ್ ಸಂಘ 1979 ರಿಂದಲೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸಬೇಕೆಂದು ಆಗ್ರಹಿಸಿ, ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಯಾವುದೇ ಸರಕಾರಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ.ರೈತರು ಬೆಳೆಗೆ ವೆಚ್ಚದ ಆಧಾರದಲ್ಲಿ ಬೆಲೆ ನಿಗಧಿ ಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ.
ಕೃಷಿ ಪರಿಕರಗಳಾದ ಗೊಬ್ಬರ, ಹನಿನೀರಾವರಿ ಪೈಪುಗಳು,ಬಿತ್ತನೆ ಬೀಜ, ಕೃಷಿ ಕಾರ್ಮಿಕರ ಕೂಲಿ, ಮಿಷನರಿಗಳ ಬಾಡಿಗೆ ಸೇರಿದಂತೆ ಎಲ್ಲವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರಗಳು ಅವೈಜ್ಞಾನಿಕವಾದ ಎಂ.ಎಸ್‌.ಪಿಗೆ ಜೋತು ಬಿದ್ದು, ಭಿಕ್ಷೆಯ ರೀತಿ, ಒಂದಿಷ್ಟು ರೂಪಾಯಿ ಹೆಚ್ಚಿಸಿ, ರೈತರಿಗೆ ಅಪಮಾನ ಮಾಡುತ್ತಿವೆ. ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ರೈತರು ವೆಚ್ಚ ಮಾಡುವ ಬೆಳೆಯ ಅಧಾರದಲ್ಲಿ ಬೆಲೆ ನಿಗಧಿಯಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಪ್ರಮುಖ ಬೆಳೆಯಾಗಿದ್ದು,ಇಂದು ಕ್ವಿಂಟಾಲ್ ಕೊಬ್ಬರಿ 11 ಸಾವಿರಕ್ಕೆ ಕುಸಿದಿದೆ.ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಸುಮಾರು 15000 ರೂಗಳ ಖರ್ಚು ಬರುತ್ತದೆ. ಹಾಗಾಗಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20000 ಸಾವಿರ ರೂ ನಿಗಧಿಪಡಿಸಬೇಕು., 2018ರ ರೈತರ 2 ಲಕ್ಷ ರೂಗಳವರೆಗಿನ ಸಾಲ ಮನ್ನಾ ಮಾಡಿದ್ದು, ಈ ಅವಧಿಯಲ್ಲಿ ಉಳಿಕೆ ರೈತರ ಸಾಲವನ್ನು ಮಾನ್ನಾ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ.
ಪ್ರತಿಭಟನೆಯಲ್ಲಿ  ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವರು.ಈಗಾಗಲೇ ರೈಲ್ವೆ ಬುಕ್ಕಿಂಗ್ ಮಾಡಲಾಗಿದೆ ಎಂದು  ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಸುರೇಶ್,ಸದಸ್ಯರಾದ ಸಂತೋಷ ಹಾರೋ ಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸಿ.ಎಸ್.ಗಂಗಾಧರಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಡಾ.ಮೋಹನ್, ಕೋಶಾಧ್ಯಕ್ಷ ಮಹಾಲಿಂಗಪ್ಪ, ಮಹಿಳಾ ಪ್ರಮುಖ ನವಿನಾ ಸದಾಶಿವಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.