Saturday, 14th December 2024

ಕೊಲೆಗಡುಕರನ್ನು ಬಂಧಿಸುವಂತೆ ಒತ್ತಾಯಿಸಿ ಮನವಿ

ತುಮಕೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆ ಖಂಡಿಸಿ ಶ್ರೀದಿಗಂಬರ ಜೈನ ಶ್ರೀಪಾರ್ಶ್ವನಾಥಸ್ವಾಮಿ ಜಿನ ಮಂದಿರ, ತುಮಕೂರು ಜಿಲ್ಲಾ ಜೈನ ಒಕ್ಕೂಟ ಹಾಗೂ ಜೈನ ಸಮುದಾಯದ ವತಿಯಿಂದ ನಗರದಲ್ಲಿಂದು ಮೌನ ಪ್ರತಿಭಟನೆ ನಡೆಸಿ, ಕೊಲೆಗಡುಕರನ್ನು ಬಂಧಿಸುವಂತೆ ಒತ್ತಾಯಿಸಿದ ಮನವಿಯನ್ನು ಸಲ್ಲಿಸಲಾಯಿತು.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮಹಾವೀರ ಭವನದ ಮುಂಭಾಗದಲ್ಲಿ ಜಮಾಯಿಸಿದ ಜೈನ ಸಮುದಾಯದ ನರಸಿಂಹ ರಾಜಪುರದ ಶ್ರೀಲಕ್ಷ್ಮಿಸೇನ ಭಟ್ಟಾಕರ ಸ್ವಾಮಿಗಳ ನೇತೃತ್ವದಲ್ಲಿ ನಗರದ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಗಳ ಕಚೇರಿಯವರಗೆ ಮೌನ ಮೆರವಣಿಗೆ ನಡೆಸಿ,ಶ್ರೀಕಾಮಕುಮಾರ ನಂದಿ ಸ್ವಾಮೀಜಿಗಳ ಹತ್ಯೆಯನ್ನು ಖಂಡಿಸಿ, ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಜೈನ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ   ಭಟ್ಟಾಕರ ಸ್ವಾಮೀಜಿ,ಅತ್ಯಂತ ಅಹಿಂಸಾತ್ಮಕ ರೀತಿಯಲ್ಲಿ ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಕೃತ್ಯವನ್ನು ಜೈನ ಸಮಾಜ ಹಾಗೂ ಜೈನಮಠಗಳು ತೀವ್ರವಾಗಿ ಖಂಡಿಸು ತ್ತವೆ. ಇಡೀ ಮನುಕುಲವೇ ತಲೆತಗ್ಗಿಸುವ ವಿಚಾರವಾಗಿದೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಕಪ್ಪುಚುಕ್ಕೆಯಾಗಿದೆ. ಹಂತಕ ರಿಗೆ ಅತ್ಯಧಿಕ ಶಿಕ್ಷೆಯನ್ನು ವಿಧಿಸಲೇಬೇಕು. ಹಂತಕರಿಗೆ ಯಾವುದೇ ರೀತಿಯ ಕರುಣೆ ತೋರಬಾರದು ಎಂದು ಸರಕಾರವನ್ನು ಆಗ್ರಹಿಸಿದರು.
ಶ್ರೀ ದಿಗಂಬರ ಜೈನ ಶ್ರೀಪಾರ್ಶ್ವನಾಥಸ್ವಾಮಿ ಜಿನ ಮಂದಿರ ಅಧ್ಯಕ್ಷ ಎಸ್.ಜೆ.ನಾಗರಾಜು ಮಾತನಾಡಿ,ಜೈನ ಸಮುದಾಯಕ್ಕೆ ಕರಾಳದಿನ.ಇಂದೊಂದು ಎಚ್ಚರಿಕೆ ಗಂಟೆ.ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದಂತಹ ಜೈನ ಧರ್ಮದ ಸಾಧು-ಸಂತರಿಗೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜತೆಗೆ ಜೈನ ಸಮಾಜಕ್ಕೆ ಸೂಕ್ತ ನ್ಯಾಯ,ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಜೋತಿಗಣೇಶ್  ಮಾತನಾಡಿ, , ಜೈನ ಮುನಿಗಳ ಭಯಾನಕ ಹತ್ಯೆ ಖಂಡನೀಯ.ಇದು ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸು ವಂತಹದ್ದು.ಮುನಿಶ್ರೀಗಳನ್ನು ಕೊಲೆಗೈದಿರುವ ಆರೋಪಿಗಳಿಗೆ ಯಾವುದೇ ದಯಾ ದಾಕ್ಷಿಣ್ಯ ತೋರಿಸದೆ ಕಠಿಣ ಶಿಕ್ಷೆಗೆ ಒಳಪಡಿ ಸಬೇಕು. ಈ ನಿಟ್ಟಿನಲ್ಲಿ ಇಂದು ಸದನದಲ್ಲಿ ಪ್ರಾಸ್ತಾಪಿಸುವುದಾಗಿ ಭರವಸೆ ನೀಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ಜೈನಮುನಿಗಳ ಹತ್ಯೆಯನ್ನು ಇಡೀ ದೇಶವೇ ಖಂಡಿಸಿದೆ.ಅತ್ಯಂತ ಕ್ರೂರ ರೀತಿಯಲ್ಲಿ ಕೊಲೆ ಮಾಡಿರುವ ಪ್ರಕರಣವನ್ನು ಸರಕಾರ ಸಿಬಿಐ ತನಿಖೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ,ಇಡೀ ಘಟನೆಯನ್ನು ಅವಲೋಕಿಸಿದರೆ ನಿಜಕ್ಕೂ ಆತಂಕಕಾರಿಯಾಗಿದೆ.ಒಬ್ಬರು ಬದುಕಲು ಇನ್ನೊಬ್ಬರ ಕೊಲ್ಲುವುದು ಮಹಾಪರಾಧ.ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಸಮಾಜ ವನ್ನು ತಿದ್ದುವ ಕೆಲಸ ಆಗಬೇಕು ಎಂದರು.
ಈ ಸಂಬಂಧ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸ್ಪೂರ್ತಿ ಚಿದಾನಂದ್,  ಜೈನ ಸಮುದಾಯದ ಬಾಹುಬಲಿ ಬಾಬು, ಜಿನೇಶ್,ಬಾಹುಬಲಿ ಎಂ.ಎ.,ಚಂದ್ರಕೀರ್ತಿ,ನಾಗೇಂದ್ರ,ಆರ್.ಎ.ಸುರೇಶ್‌ಕುಮಾರ್,ನಾಗರಾಜು ಟಿ.ಜೆ.,ಸುಭೋದ್ ಕುಮಾರ್,ಪದ್ಮಪ್ರಸಾದ್, ಜೈನ್ ಮಿಲನ್, ಜೈನ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.