Sunday, 15th December 2024

ನೇಹಾ ಕೊಲೆ ಖಂಡಿಸಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಸಾಧು ಸಂತರು, ವಿವಿಧ ಸಂಘಟನೆ ಪದಾಧಿಕಾರಿಗಳು ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ಯಪಡಿಸಿದರು. ಆರೋಪಿಗೆ ತಕ್ಷಣ ಕಠಿಣ ಶಿಕ್ಷೆಯಾಗಬೇಕು, ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ‘ಬಿಜೆಪಿ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನೀಚತನದ ಪರಮಾವಧಿ. ಮಾನವೀಯತೆ ತಲೆ ತಗ್ಗಿಸುವಂಥ ಕೆಲಸವಾಗಿದೆ. ಬಹುಸಂಖ್ಯಾತ ರಾಜಕಾರಣಿಗಳು ನೇಹಾ ಕೊಲೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂದು ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ಯಾವುದೇ ಸರ್ಕಾರ ಇಂಥ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಜವಾಬ್ದಾರಿಯಿಂದ ವರ್ತಿಸಬೇಕು. ರಾಜ್ಯ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಚಿಂತಿಸಬೇಕು. ಒಂದು ಪಕ್ಷ ಲವ್ ಜಿಹಾದ್ ಎಂದರೆ, ಮತ್ತೊಂದು ಪಕ್ಷ ವೈಯಕ್ತಿಕ ಎನ್ನುತ್ತಿದೆ. ನೀವು ನೈತಿಕವಾಗಿ ನಿಮ್ಮ ನಿಮ್ಮ ಸ್ಥಾನದಲ್ಲಿ ಇರಲು ಯೋಗ್ಯರೇ’ ಎಂದು ಪ್ರಶ್ನಿಸಿದರು.

ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶೀಘ್ರ ಶಿಕ್ಷೆ ನೀಡಲು ಕಾನೂನು ಬದಲಾಯಿಸಬೇಕು. ಶಿಕ್ಷಣದಲ್ಲಿ ನೀತಿ, ಶಾಸನದಲ್ಲಿ ಭೀತಿಯಿಲ್ಲವಾಗಿದೆ. ಮಕ್ಕಳಿಗೆ ಶಿಕ್ಷಣದ, ನೀತಿಯ ಬೆಲೆ ಅರಿವು ಮೂಡಿಸಬೇಕಿದೆ. ಎಲ್ಲಿಯವರೆಗೆ ಆರೋಪಿಗೆ ಉಗ್ರ ಶಿಕ್ಷೆಯಾಗುವುದಿಲ್ಲವೋ, ಅಲ್ಲಿವರೆಗೆ ಭೂಮಿಯಲ್ಲಿ ಯಾರೂ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ’ ಎಂದರು.

‘ಯಾರಾದರೂ ಈ ಪ್ರಕರಣಗಳನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಂಡರೆ, ಅವರ ದಿಕ್ಕು ಬದಲಿಸಬೇಕಾಗುತ್ತದೆ. ಹೇಳಿಕೆ ನೀಡುವ ನಾಯಕರ ಮನೆಯ ಮಗಳಾಗಿದ್ದರೆ ಏನಾಗುತ್ತಿತ್ತು? ವಿದ್ಯಾರ್ಥಿನಿಯ ನಡತೆ ಸರಿ ಇಲ್ಲ ಎನ್ನುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಇದು ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸವಣೂರಿನ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ನೇಹಾ ಕೊಲೆ ರಾಜಕೀಯ ಪಕ್ಷಗಳು ತಮ್ಮ‌ ಲಾಭಕ್ಕೆ ಬಳಸಿಕೊಳ್ಳಬಾರದು. ಕಾನೂನು ವ್ಯಾಪ್ತಿಗೆ ಬಿಟ್ಟು ಬಿಡಬೇಕು. ಯಾವುದೇ ವ್ಯಕ್ತಿ ಸ್ವಪ್ರತಿಷ್ಠೆಗೆ ಬಳಸಿಕೊಳ್ಳಬಾರದು. ಆರೋಪಿಗೆ ಶೀಘ್ರ ಶಿಕ್ಷೆ ವಿಧಿಸಬೇಕು’ ಎಂದು ಹೇಳಿದರು.