Sunday, 15th December 2024

ಮಾನವೀಯತೆ ಮೆರೆದ ಕೊರಟಗೆರೆ ಪಿಎಸೈ: ತುಮಕೂರು-ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೆದ್ದಾರಿಯಲ್ಲಿ ಭೀಕರ ಅಪಘಾತ ೨ಸಾವು ೯ಜನರಿಗೆ ಗಾಯ

ಕೊರಟಗೆರೆ: ರಾಜ್ಯ ಹೆದ್ದಾರಿಯಲ್ಲಿ ನಡೆದ ಬೀಕರ ಅಪಘಾತದಲ್ಲಿ ಓರ್ವ ಮಹಿಳೆಯು ಸ್ಥಳದಲ್ಲೇ ಮೃತಪಟ್ಟರೇ ಗಂಭೀರವಾಗಿ ಗಾಯಗೊಂಡು ನರಳುತ್ತೀದ್ದ ೧೦ ಜನರನ್ನು ಕೊರಟಗೆರೆ ಪಿಎಸೈ ಚೇತನ್‌ಗೌಡ ಸ್ಥಳೀಯರ ಸಹಾಯದಿಂದ ತಮ್ಮ ಪೊಲೀಸ್ ವಾಹನದಲ್ಲೇ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಜಿ.ನಾಗೇನಹಳ್ಳಿ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಭೀಕರ ಅಪಘಾತವಾಗಿದೆ. ಅಪಘಾತಕ್ಕೆ ರಭಸಕ್ಕೆ ರಾಜ್ಯ ಹೆದ್ದಾರಿಯಿಂದ ಇಳಿಜಾರಿನ ಪ್ರದೇಶಕ್ಕೆ ಹಾರಿಹೋಗಿ ಪೆಟ್ರೋಲ್ ಟ್ಯಾಂಕು ಸಿಡಿದು ಬೆಂಕಿಯು ಆವರಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ.

ಮಾನವೀಯತೆ ಮೆರೆದ ಕೊರಟಗೆರೆ ಪಿಎಸೈ..
ಅಪಘಾತದಲ್ಲಿ ಕೈಕಾಲು ಮುರಿದುಕೊಂಡು ರಸ್ತೆಯಲ್ಲಿ ನರಳುತ್ತೀದ್ದ ೧೦ ಜನರನ್ನು ಕೊರಟಗೆರೆ ಪಿಎಸೈ ಚೇತನ್‌ಗೌಡ ತಮ್ಮ ಪೊಲೀಸ್ ವಾಹನದಲ್ಲಿಯೇ ಸಿಬ್ಬಂದಿಗಳ ಸಹಾಯದಿಂದ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಧಗಧಗನೇ ಉರಿಯುತ್ತೀದ್ದ ಕಾರಿನ ಸಮೀಪವೇ ಬಿದ್ದಿದ್ದ ಮಹಿಳೆಯ ಮೃತದೇಹವನ್ನು ಇಳಿಜಾರಿನಿಂದ ತಾವೇ ಸ್ವತಃ ರಸ್ತೆಗೆ ಎತ್ತಿಕೊಂಡು ಬಂದು ಆಟೋ ಮೂಲಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.

ಚಾಲಕರ ನಿರ್ಲಕ್ಷ ಮತ್ತು ಅತಿವೇಗದ ಚಾಲನೆ..
ಕಾರು ಚಾಲಕರ ನಿರ್ಲಕ್ಷ ಮತ್ತು ಅತಿವೇಗದ ಚಾಲನೆಯಿಂದ ಎರಡು ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ಅಪಘಾತ ದಲ್ಲಿ ಬೆಂಗಳೂರು ಮೂಲದ ಮಹಿಳೆ ಪುಪ್ಪಲತಾ(೪೫) ಸ್ಥಳದಲ್ಲಿಯೇ ಮೃತಪಟ್ಟರೇ ಮತ್ತು ಪ್ರೀಯಾ(೧೭) ಎಂಬಾಕೆ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ಶ್ರೀನಿವಾಸ್, ಮಂಜುನಾಥ, ಮನು, ರಂಗನಾಥ ಸೇರಿದಂತೆ ಗಂಭೀರವಾಗಿ ಗಾಯಗೊಂಡ ೧೦ಜನರನ್ನು ಕೊರಟಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ತುಮಕೂರು ಸಾರ್ವಜನಿಕ ಆಸ್ಪತ್ರೆ ಮತ್ತು ಬೆಂಗಳೂರು ನಿಮ್ಹಾನ್ಸ್ಗೆ ದಾಖಲಿಸಲಾಗಿದೆ.

ರಾಜ್ಯ ಹೆದ್ದಾರಿನಲ್ಲಿ ನಡೆದ ಅಪಘಾತದಲ್ಲಿ ಧಗಧಗನೇ ಉರಿಯುತ್ತೀದ್ದ ಕಾರಿನ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿವರ್ಗ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು, ಕೊರಟಗೆರೆ ಸಿಪಿಐ ಸುರೇಶ್, ಪಿಎಸೈ ಚೇತನ್‌ಗೌಡ ಸೇರಿದಂತೆ ೧೧೨ಪೊಲೀಸ್ ವಾಹನ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.