Thursday, 21st November 2024

ಕಾಲೇಜು ಕಟ್ಟಡದಿಂದ ಬಿದ್ದು ದ್ವಿತೀಯ ಪಿಯು ವಿದ್ಯಾರ್ಥಿನಿ ಸಾವು

ಶಿವಮೊಗ್ಗ: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕಾಲೇಜಿನ ನಾಲ್ಕನೇ ಅಂತಸ್ತಿನಿಂದ ಬಿದ್ದು ಮೃತಪಟ್ಟಿದ್ದಾಳೆ.

ಶಿವಮೊಗ್ಗದ ಶರಾವತಿ ನಗರ ಬಡಾವಣೆಯ ಖಾಸಗಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಘಶ್ರೀ(18) ಮೃತಳು. ಬೆಳಗ್ಗೆ ಕಾಲೇಜಿನಲ್ಲಿ ಜೀವಶಾಸ್ತ್ರದ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆ ನಡೆಯುವ ಮಧ್ಯೆ ಶೌಚಾಲಯಕ್ಕೆಂದು ಹೊರ ಹೋದ ವಿದ್ಯಾರ್ಥಿನಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಕಟ್ಟಡದ ಮೇಲಿಂದ ಬಿದ್ದು ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣ ಕಾಲೇಜಿನ ಸಿಬ್ಬಂದಿಗಳು ಮೆಗ್ಗಾನ್ ಬೋಧನಾಸ್ಪತ್ರೆಗೆ ರವಾನಿಸಿದ್ದಾರೆ.‌ ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಆಕೆ ಮೃತಪಟ್ಟಿದ್ದಾಳೆ. ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿ ಮೃತಪಟ್ಟ ಬಗ್ಗೆ ತಡವಾಗಿ ವಿಷಯ ತಿಳಿಸಿದ್ದಕ್ಕೆ ಪೋಷಕರು ಕಾಲೇಜಿಗೆ ಆಗಮಿಸಿ ಆಕ್ರೋಶ ಹೊರ ಹಾಕಿದ್ದಾರೆ. ಪೋಷಕರು ಮತ್ತು ಸಂಬಂಧಿಕರು ಕಾಲೇಜಿನ ಬಳಿ ಬಂದಾಗ ಗೇಟು ತೆಗೆಯದೇ ಕಾಲೇಜಿನವರು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ಕಾಲೇಜಿನ ಒಳಗೆ ಬಂದ ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಬಂಧಿಕರು ಆಡಳಿತ ಮಂಡಳಿಯ ವಿರುದ್ಧ ಧಿಕ್ಕಾರ ಕೂಗಿದರು.

ಮೇಘಶ್ರೀ ಶಾಲಾ ಕಟ್ಟಡದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ. ಆದರೆ ಪೋಷಕರು ಕಾಲೇಜಿನ ಉಪ ನ್ಯಾಸಕರ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಕಾಲೇಜಿನವರ ಟಾರ್ಚರ್​ನಿಂದಲೇ ನಮ್ಮ ಮಗಳು ಇಂದು ಸಾವನ್ನ‌ಪ್ಪಿದ್ದಾಳೆ. ಈ ಕುರಿತು ಸೂಕ್ತ ತನಿಖೆ ಆಗಬೇಕೆಂದು ಒತ್ತಾಯಿಸಿದರು.

ವಿದ್ಯಾರ್ಥಿನಿ ಸಾವು ಕುರಿತು ಪ್ರತಿಕ್ರಿಯಿಸಿದ ಕಾಲೇಜು ಪ್ರಾಂಶುಪಾಲ ಗುರುರಾಜ್ ಅವರು, ವಿದ್ಯಾರ್ಥಿನಿಯು ಸ್ಟೇರ್​ಕೇಸ್​ನಿಂದ ಬಿದ್ದು ಗಾಯಗೊಂಡಿ ದ್ದರು. ಅವರನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಪೊಲೀಸರು ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.