ತುಮಕೂರು : ಜಿಲ್ಲೆಯಲ್ಲಿ ೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆ ೧,೨೧,೨೧೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ರಾಗಿ ಬೆಳೆಯು ಬಹುತೇಕ ಕಾಳು ಬಲಿಯುವ ಹಂತದಿಂದ, ಕಟಾವಿನ ಹಂತ ತಲುಪಿರುತ್ತದೆ ಹಾಗೂ ಅಲ್ಲಲ್ಲಿ ಕಟಾವು ಪ್ರಾರಂಭವಾಗಿದೆ.
ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದು, ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಘಂಟೆಗೆ ರು.3000 ರಿಂದ ರು.3500 ಗಳವರೆಗೆ ಬಾಡಿಗೆ ಹಣ ನಿಗದಿಪಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ.
ರಾಗಿ ಕಟಾವು ಮಾಡಲು ಯಂತ್ರಕ್ಕೆ ಪ್ರತಿ ಘಂಟೆಗೆ ರು.2700 ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಿದೆ. ತಪ್ಪಿದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ ೨೦೦೫ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.