Friday, 22nd November 2024

Rain in Tumkur: ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ

ತುಮಕೂರು: ಸುರಿಯುತ್ತಿರುವ ಮಳೆಯ ಪರಿಣಾಮ ನಗರದ ಆರ್.ಟಿ.ನಗರದ ಹೋರಿ ಮುದ್ದಪ್ಪ ಬಡಾವಣೆಯಲ್ಲಿ ಮಳೆನೀರು ಹಾಗೂ ಯುಜಿಡಿ ಕೊಳಚೆ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿದೆ. ಇದರಿಂದ ಇಡೀ ಪ್ರದೇಶದಲ್ಲಿ ದುರ್ವಾಸನೆ ಆವರಿಸಿ ನಿವಾಸಿಗಳು ನಿತ್ಯ ಸಂಕಟ ಅನುಭವಿಸುವಂತಾಗಿದೆ.

ಈ ಪ್ರದೇಶದಲ್ಲಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಯಿಂದಾಗಿ ಪ್ರತಿ ಬಾರಿ ಮಳೆ ಸುರಿದಾಗಲೂ ಇಲ್ಲಿನ ಜನ ಇಂತಹ ಸಮಸ್ಯೆ ಅನುಭವಿಸುವಂತಾಗಿದೆ.

ಈ ಸಮಸ್ಯೆ ಬಗ್ಗೆ ಹಲವು ಬಾರಿ ನಗರಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು.

ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ವಿಪರೀತ ಮಳೆ ಸುರಿದಾಗ ಮಳೆನೀರು ಸರಾಗವಾಗಿ ಹರಿದು ಹೋಗದೆ, ರಸ್ತೆ, ಮನೆಗಳಿಗೆ ನುಗ್ಗಿ ಅವಾಂತರ ಸೃಸ್ಟಿಸುತ್ತದೆ. ಸಾಲದಕ್ಕೆ ಇಲ್ಲಿನ ಒಳಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ, ಕಸ ತುಂಬಿವೆ.

ಮಳೆಗಾಲದಲ್ಲಿ ನೀರು ಹರಿದು ಒಳಚರಂಡಿಗಳ ಕೊಳಚೆ ಉಕ್ಕಿ ರಸ್ತೆ, ಮನೆಗಳಿಗೆ ಹರಿಯುತ್ತದೆ. ಮಳೆಗಾಲ ಆರಂಭವಾದಾಗಿನಿಂದ ಇಲ್ಲಿನ ನಿವಾಸಿಗಳು ನೆಮ್ಮದಿಯಾಗಿ ಇರಲು ಸಾಧ್ಯವಾಗಿಲ್ಲ, ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಹಲವು ದಿನಗಳಿಂದ ನೀರು ಸಂಗ್ರಹವಾಗಿ ಕಟ್ಟಡಗಳ ಪಾಯ ಜನಿದು ಮನೆಗೆ ನುಗ್ಗುತ್ತಿದ್ದು, ಈ ನೀರನ್ನು ನಿಯಂತ್ರಿಸಲಾಗದೆ ಜನ ಕಂಗಾಲಾಗಿದ್ದಾರೆ.

ನಗರದ ಶಾಸಕರು, ನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಗಿರುವ ಸಮಸ್ಯೆ ಪರಿಶೀಲಿಸಿ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಉಂಟಾಗುತ್ತಿರುವ ಕಾರಣಕ್ಕೆ ಶಾಶ್ವತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಇಲ್ಲಿನ ನಿವಾಸಿಗಳಾದ ಗಂಗಾಧರಪ್ಪ, ಸದಾಶಿವಯ್ಯ, ಬಸವರಾಜು, ಮಹೇಶ್, ಮಂಜಣ್ಣ, ಜಗದಾಂಬ, ನಾಗೇಂದ್ರಪ್ರಸಾದ್ ಶಾಸಕರು ಹಾಗೂ ನಗರ ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Bengaluru Rain: ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರ ಸಾವು; ಅವಶೇಷಗಳಡಿ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ