Tuesday, 10th September 2024

Rain News: ಮಳೆ ಅವಾಂತರಕ್ಕೆ ಮನೆಯ ಗೋಡೆ ಕುಸಿದು ಮಹಿಳೆ ಸಾವು

Rain News

ಯಾದಗಿರಿ: ಮಳೆ ಅವಾಂತರಕ್ಕೆ (Rain News) ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ  ಗ್ರಾಮದಲ್ಲಿ ನಡೆದಿದೆ. ಸಕೀನಾಬಿ ನದಾಫ್ (70) ಮೃತ ದುರ್ದೈವಿ. ಮನೆ ಗೊಡೆ ಕುಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ವೃದ್ದೆ ಸಕೀನಾಬಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಪರಿಚಿತ ಮಲ್ಲಿಕಾರ್ಜುನ ಅವರ ಮನೆ ಮುಂಭಾಗದ ಕಟ್ಟೆ ಮೇಲೆ ಮಹಿಳೆಯರ ಜತೆ ಮಾತನಾಡುತ್ತಾ ಕುಳಿತಿದ್ದಾಗ ಸಕೀನಾಬಿ ಮೇಲೆ  ಗೋಡೆ ಕುಸಿದಿದ್ದರಿಂದ ದುರ್ಘಟನೆ ಸಂಭವಿಸಿದೆ. ಇಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಮೆಡಿಕಲ್ ಸೀಟ್ ಸಿಗಲಿಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ

self Harming

ಕಲಬುರಗಿ: ಮೆಡಿಕಲ್ ಸೀಟ್ ಸಿಗಲಿಲ್ಲವೆಂದು ಮನನೊಂದು, ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದುದ್ದಣಗಿ ಗ್ರಾಮದಲ್ಲಿ ನಡೆದಿದೆ.

ದುದ್ದಣಗಿ ಗ್ರಾಮದ ಶ್ವೇತಾ ಅಪ್ಪಾಸಾಬ ಗುಣಾರಿ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ನೀಟ್ ಪರೀಕ್ಷೆ ಬರೆದರು ಸಹ ಮೆಡಿಕಲ್‌ ಸೀಟ್ ಸಿಗಲಿಲ್ಲ ಎಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಯುವತಿ ಆತ್ಮಹತ್ಯೆ ಪ್ರಕರಣ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೋರಮಂಗಲ ಪಿಜಿಯಲ್ಲಿನ ಹತ್ಯೆ ಪ್ರಕರಣ; 1,205 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೋರಮಂಗಲದ ಪಿಜಿಯಲ್ಲಿನ ಯುವತಿಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಬರೋಬ್ಬರಿ 1,205 ಪುಟಗಳ ಚಾರ್ಜ್‌ಶೀಟ್‌ (Charge sheet) ಸಲ್ಲಿಸಿದ್ದಾರೆ (PG murder case). ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ಈ ಬಗ್ಗೆ ಮಾಹಿತಿ ನೀಡಿ, ”ಕೋರಮಂಗಲದ ಪಿಜಿಯೊಂದರಲ್ಲಿ ಉತ್ತರ ಭಾರತ ಮೂಲದ ಕೃತಿ ಕುಮಾರಿ ಎಂಬವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ, 23 ವರ್ಷದ ಮಧ್ಯಪ್ರದೇಶ ಮೂಲದ ಅಭಿಷೇಕ್‌ ಘೋಷಿ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆʼʼ ಎಂದು ತಿಳಿಸಿದ್ದಾರೆ (Crime News)

ಈ ದೋಷಾರೋಪ ಪಟ್ಟ 85 ಸಾಕ್ಷಿಗಳ ಹೇಳಿಕೆ, ಅಪರಾಧ ಕೃತ್ಯದ ವಿವರಗಳನ್ನು ಒಳಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜುಲೈ 24ರಂದು ಎಫ್‌ಆರ್‌ಐ ದಾಖಲಿಸಲಾಗಿತ್ತು. ಜುಲೈ 26ರಂದು ಮಧ್ಯಪ್ರದೇಶದಿಂದ ಪ್ರಮುಖ ಆರೋಪಿ ಅಭಿಷೇಕ್‌ನನ್ನು ಬಂಧಿಸಲಾಗಿತ್ತು. ಬಿಹಾರ ಮೂಲದ ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆಕೆಯ ಗೆಳತಿಯ ಪ್ರಿಯಕರನಾಗಿದ್ದ ಅಭಿಷೇಕ್‌ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ. ಆತನ ಪ್ರಿಯತಮೆ ಮಹಾರಾಷ್ಟ್ರ ಮೂಲದವಳು.

ಪ್ರಕರಣದ ಹಿನ್ನಲೆ

ಜು. 23ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನು ಎರಡೇ ನಿಮಿಷದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ. ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದ. ಮೊದಲು ಪಿಜಿ ರೂಮಿನ ಬಾಗಿಲು ಬಡಿದ ಅಭಿಷೇಕ್‌ ಕೃತಿ ಬಾಗಿಲು ತೆರೆದ ಕೂಡಲೇ ಒಳಹೋಗಿದ್ದ. ನಂತರ ಕೆಲವು ಸೆಕೆಂಡ್‌ನಲ್ಲಿ ಆಕೆ ಆತನಿಂದ ಪಾರಾಗಲು ಹೊರಗೋಡಿ ಬಂದಿದ್ದು, ಆಕೆಯನ್ನು ಕಾರಿಡಾರ್‌ನಲ್ಲೇ ತಡೆದ ಪಾತಕಿ ಮನಬಂದಂತೆ ಇರಿದಿದ್ದ.

ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಳು. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಆರ್ತನಾದ ಮಾಡಿದರೂ ಪಿಜಿಯಲ್ಲಿದ್ದ ಮೂವರು ಯುವತಿ ನೋಡಿಯೂ ಸಹಾಯಕ್ಕೆ  ಹತ್ತಿರ ಬಂದಿರಲಿಲ್ಲ. ಮಾನವೀಯತೆಯನ್ನೇ ಮರೆತಂತೆ ವರ್ತಿಸಿದ ಇವರು ಕೃತಿ ಕುಮಾರಿಯ ಹತ್ತಿರ ಕೂಡ ಹೋಗಿರಲಿಲ್ಲ. ಕೈಯಲ್ಲಿದ್ದ ಮೊಬೈಲ್ ಫೋನ್‌ ನೋಡ್ತಾ ಆಚೆ ಹೋಗಿದ್ದರು. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್‌ ಆಗಿತ್ತು. ಯುವತಿಯರ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದರು.

 

 

Leave a Reply

Your email address will not be published. Required fields are marked *