ವರುಣನ ರೌದ್ರಾವತಾರ ನದಿಯಂತಾದ ರಸ್ತೆಗಳು..
ಜಮೀನು, ಶಾಲೆ, ಮನೆಗಳಿಗೆ ನುಗ್ಗಿದ ಮಳೆ ನೀರು… ಮುಳುಗಿದ ಸೇತುವೆಗಳು
ಯಾದಗಿರಿ: ದಕ್ಷಿಣ ಕರ್ನಾಟಕದಲ್ಲಿ ಸುರಿಯುತ್ತಿದ್ದ ಮಳೆ ಸದ್ಯ ಉತ್ತರ ಕರ್ನಾಟಕ ಭಾಗಕ್ಕೆ ಕಾಲಿಟ್ಟಿದ್ದು ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳ ರಸ್ತೆಗಳು ನದಿಯಂತಾಗಿ, ಜನಜೀವನ ಸಂಪೂರ್ಣವಾಗಿ
ಅಸ್ತವ್ಯಸ್ತವಾಗಿದೆ.
ಹುಣಸಗಿ ತಾಲ್ಲೂಕಿನ ಗೆದ್ದಲಮರಿ ಸೇತುವೆ ಮತ್ತು ಹೆಬ್ಬಾಳ ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇನ್ನೂ ಹುಣಸಗಿ ಯಲ್ಲಿರುವ ಹಳ್ಳದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಜಲದಿಗ್ಬಂದನ ಉಂಟಾಗಿದ್ದು ದೇವಸ್ಥಾನಕ್ಕೆ ತೇರಳುವ ಸೇತುವೆ ಮುಳುಗಡೆಯಾಗಿದೆ. ಮನೆಗಳಿಗೂ, ಶಾಲೆ ಅವಣಕ್ಕೂ ಮಳೆ ನೀರು ಆವರಿಸಿದೆ.
ದೇವತ್ಕಲ್, ಸಿದ್ದಾಪುರ, ಬೆನಕನಹಳ್ಳಿ , ಶಟಗೇರಾ, ಗೋಡಿಹಾಳ, ಕಚಕನೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುರಿದ ಬಾರಿ ಮಳೆಗೆ ಗ್ರಾಮದ ರೈತರ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬತ್ತ, ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆಗಳು ನೆಲಸಮವಾಗಿವೆ.
ಸಿದ್ದಾಪೂರ ಗ್ರಾಮದಲ್ಲಿ ಚರಂಡಿ ಹೂಳು ತುಂಬಿಕೊಂಡಿರುವುದರಿಂದ, ರಸ್ತೆ ಮೇಲೆ ಮಳೆ ನೀರು ಹರಿಯುತ್ತಿದ್ದು ಇದರಿಂದ ಜನರು ಮನೆಯಿಂದ ಹೊರ ಬಾರದಂತ ಸ್ಥಿತಿ ನಿರ್ಮಾಣವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಚರಂಡಿ ದುರಸ್ಥಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಮುನಿಸಿಕೊಂಡಿದ್ದ ವರುಣ ತನ್ನ ರೌದ್ರಾವತಾರ ಮೆರೆಯುತ್ತಿದ್ದು ಒಂದೇ ದಿನಕ್ಕೆ ಸಂಪೂರ್ಣವಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.