ಬಾಗೇಪಲ್ಲಿ: ಕರ್ನಾಟಕ ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ ೮ನೇ ರಾಜ್ಯ ಸಮ್ಮೇಳನವನ್ನು ಬಾಗೇಪಲ್ಲಿ ಪಟ್ಟಣದಲ್ಲಿ ನವಂಬರ್ ೨೯,೩೦ ,ಡಿಸೆಂಬರ್ ೦೧,೨೦೨೨ರಂದು ನಡೆಸಲಾಗುವುದು ಎಂದು ಸಮ್ಮೇಳನದ ಗೌರವಾಧ್ಯಕ್ಷ ಡಾ. ಅನಿಲ್ ಕುಮಾರ್ ತಿಳಿಸಿದರು.
ಬಾಗೇಪಲ್ಲಿ ಪಟ್ಟಣದ ತಾಲೂಕು ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದರು.
ಹೋರಾಟಗಳ ತವರು ನೆಲೆಯಾದ ಬಾಗೇಪಲ್ಲಿಯಲ್ಲಿ ಕರ್ನಾಟಕ ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ ೮ನೇ ರಾಜ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನದಲ್ಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷರು, ಮಾಜಿ ಸಂಸತ್ ಸದಸ್ಯ ಕಾಮ್ರೇಡ್ ಎ ವಿಜಯ ರಾಘವನ್, ಸುಪ್ರಿಂ ಕೋರ್ಟಿನ ವಿಶ್ರಾಂತ ನ್ಯಾಯ ಮೂರ್ತಿ ವಿ ಗೋಪಾಲಗೌಡ ಸೇರಿ ಇನ್ನು ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ೫೦೦ ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಕೂಲಿಕಾರ ಸಂಘದ ಸಂಗಾತಿಗಳು ಭಾಗವಹಿಸುವರು ಎಂದರು.
ಮೂರು ದಿನಗಳ ಕಾಲ ಕೃಷಿ, ಮತ್ತು ಕೂಲಿ ಕಾರ್ಮಿಕರ ಸಮಸ್ಯೆಗಳ, ಕೇಂದ್ರ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ಹೋರಾಟಗಳನ್ನು ರೂಪಿಸುವ ಐತಿಹಾಸಿಕ ಸಮ್ಮೇಳನ ಇದಾಗಿದೆ.ಈ ಸಮ್ಮೇಳನವು ಭಾರತ ಸಮ್ಮೇಳ ನಕ್ಕೆ ಮುನ್ನುಡಿಯಾಗಬೇಕಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯು ನಿರಂತರ ಬರಗಾಲಕ್ಕೆ ತುತ್ತಾಗುವ ಪ್ರದೇಶವಾಗಿದ್ದು ನಿರಂತರ ನೀರು ಹರಿಯುವ ನದಿ, ನಾಲೆಗಳು ಇಲ್ಲದೆ ಕೇವಲ ಮಳೆಯಾಶ್ರಿತ ಕೃಷಿ ಅವಲಂಭಿಸಿದೆ. ಇಲ್ಲಿನ ಬಡ ರೈತರು ಮತ್ತು ಕೃಷಿ ಕೂಲಿಕಾರರ ಸಮಸ್ಯೆಗಳು ಒಂದೇ ರೀತಿಯಲ್ಲಿವೆ. ಅಂತರ್ಜಲ ಮಟ್ಟ ಕುಸಿದಿರುವುದು, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು, ರೈತರು ಬೆಳೆಗಳಿಗೆ ಲಾಭದಾಯಕ ಬೆಲೆ ಇಲ್ಲದಿರುವ ಕಾರಣ ಕೃಷಿ ದುಬಾರಿಯಾಗಿ ಬಡ ರೈತರು ಕೃಷಿ ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ.
ಜೀವನಕ್ಕೆ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಆಡಳಿತಕ್ಕೆ ಬಂದಿರುವ ಎಲ್ಲಾ ಸರ್ಕಾರಗಳು ಕೃಷಿ ಕೂಲಿ ಕೂಲಿಕಾರರನ್ನು ಕಡೆಗಣಿಸುತ್ತಾ ಬಂದಿವೆ. ವರ್ಷದಲ್ಲಿ ೨೦೦ ದಿನ ಕೆಲಸ ಹಾಗೂ ೬೦೦ ಕೂಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿ ಕೆಲಸ ನೀಡಲು ಸಂಘವು ಒತ್ತಾಯಿಸುತ್ತದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮಗ್ರ ಅನುಷ್ಠಾನಕ್ಕಾಗಿ ಹಾಗೂ ವಾರ್ಷಿಕ ೨೦೦ ದಿನಗಳ ಕೆಲಸಕ್ಕಾಗಿ ಮತ್ತು ಕನಿಷ್ಠ ಕೂಲಿ ಕಾಯಿದೆ ಜಾರಿಗೆ ಆಗ್ರಹಿಸುತ್ತದೆ ಎಂದರು.
ಈ ವೇಳೆ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಮುನಿವೆಂಕಟಪ್ಪ, ನಾಗರಾಜು, ಮಾಜಿ ಜಿ.ಪಂ.ಸದಸ್ಯೆ,ಸಾವಿತ್ರಮ್ಮ, ದೇವಕುಂಟೆ ಶ್ರೀನಿವಾಸ್ ಮತಿತರರು ಇದ್ದರು.