ರಾಮನಗರ: ಕಾಡಾನೆ ತುಳಿದು ರೈತ ಮೃತಪಟ್ಟ ಘಟನೆ ಕನಕಪುರ ತಾಲೂಕಿನ ಆನೆಕೆರೆ ದೊಡ್ಡಿ ಗ್ರಾಮದ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
63 ವರ್ಷದ ತಿಮ್ಮಯ್ಯ ಎಂಬ ಮೃತ ರೈತ, ರೇಷ್ಮೆ ಕೃಷಿ ಮಾಡುತ್ತಿದ್ದರು.
ಗ್ರಾಮದ ಪಕ್ಕಕ್ಕೆ ರೇಷ್ಮೆ ಹುಳುವಿನ ಮನೆ ಹೊಂದಿದ್ದ ರೈತ ತಿಮ್ಮಯ್ಯ, ರೇಷ್ಮೆ ಹುಳುವಿಗೆ ಸೊಪ್ಪು ಹಾಕಲು ತೆರಳಿದ್ದರು. ನಂತರ ವಾಪಸ್ ಮನೆಗೆ ಬರುವ ವೇಳೆ ಕಾಡಾನೆ ದಾಳಿ ಮಾಡಿದೆ. ಈ ಆನೆ ದಾಳಿಗೆ ತಿಮ್ಮಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ದೌಡಾ ಯಿಸಿದರು. ಘಟನೆ ನಡೆದ ಸ್ಥಳವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಟ್ಟಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಕೂಡಲೇ ಬರಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಆನೆ ದಾಳಿ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಪದೇ ಪದೇ ಕನಕಪುರ ತಾಲೂಕಿನ ಗಡಿ ಗ್ರಾಮಗಳಲ್ಲಿ ನಿರಂತರವಾಗಿ ಆನೆ ದಾಳಿ ನಡೆಯುತ್ತಿದ್ದರೂ ಅರಣ್ಯಾಧಿಕಾರಿಗಳು ಶಾಶ್ವತ ಪರಿಹಾರ ಕಾರ್ಯ ಮಾತ್ರ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.