Thursday, 12th December 2024

ಕೆ.ಎಂ. ಪರಮೇಶ್ವರಯ್ಯ ನಿಧನ ಅಪಾರ ನೋವು ತಂದಿದೆ : ರಂಗಾಪುರಶ್ರೀ

ತಿಪಟೂರು : ನಮ್ಮ ಶ್ರೀ ಮಠದ ವಿದ್ಯಾಸಂಸ್ಥೆಯಲ್ಲಿ ೩೦ವರ್ಷಗಳಿಗೂ ಹೆಚ್ಚು ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿ ಪ್ರಾಮಾ ಣಿಕತೆ ಮತ್ತು ಶ್ರದ್ಧೆಯಿಂದ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದ ಕೆ.ಎಂ. ಪರಮೇಶ್ವರಯ್ಯ (೬೩) ಅನಾರೋಗ್ಯದಿಂದ ಮಂಗಳವಾರ ಶಿವೈಕ್ಯ ರಾಗಿರುವುದು ನಮಗೆ ಅಪಾರ ನೋವು ತಂದಿರುವುದಲ್ಲದೆ ಶ್ರೀಮಠದ ಶಿಕ್ಷಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ನಷ್ಟವುಂಟಾಗಿದೆ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಅಭಿಪ್ರಾಯಪಟ್ಟಿದ್ದಾರೆ.

ಮೃತರು ತಾಲ್ಲೂಕಿನ ಧಾರ್ಮಿಕ ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರು ಹಾಗೂ ಸಾಹಿತ್ಯ, ಧಾರ್ಮಿಕ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೆ ಬಹುಮುಖ ಪ್ರತಿಭೆ ಹೊಂದಿದ್ದ ಇವರು ಸಾಕಷ್ಟು ಬಸವಾದಿ ಶರಣರ ತತ್ವ, ಚಿಂತನೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಲ್ಲದೆ ಅನೇಕ ಲೇಖನಗಳು, ಕಿರುಹೊತ್ತಿಗೆಗಳು ಮತ್ತು ಪುಸ್ತಕಗಳನ್ನು ಬರೆದು ಪ್ರಕಾಶಿಸಿದ್ದರು. ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳಲ್ಲಿ ಹಾಗೂ ಸಮಾಜದ ಮಹನೀಯರ ಜಯಂತಿಗಳಲ್ಲಿ ನಿರರ್ಗಳವಾಗಿ ಉಪನ್ಯಾಸ ನೀಡುತ್ತಾ ಎಲ್ಲಾ ಸಮಾಜ ಬಂಧುಗಳ ಆಪ್ತರಾಗಿದ್ದರು. ಸರಳ, ಮುಗ್ದ, ಸಹೃದಯಿಯಾಗಿದ್ದ ಇವರು ತಾಲೂಕಿನಾದ್ಯಂತ ಕೆಎಂಪಿ ಎಂದೇ ಚಿರಪರಿಚಿತರಾಗಿದ್ದರು.

ಇತ್ತೀಚಿಗಷ್ಟೇ ಬಸವ ಜಯಂತಿಯಂದು ಕಾರುಣ್ಯ ಶಿಶು ಪುಸ್ತಕ ಹಾಗೂ ಶರಣರ, ಸಂತರ ವಚನಗಳ ಸಂಗ್ರಹದ ಪುಟ್ಟ ಕೃತಿಯನ್ನು ಬಿಡುಗಡೆ ಮಾಡಿ ದ್ದರು. ಇವರ ಅಷ್ಟಾವರಣದ ಕಿರುಹೊತ್ತಿಗೆ ಪ್ರಕಟಣೆಯ ಹಂತದಲ್ಲಿತ್ತು. ಶಸಾಪ ಅಧ್ಯಕ್ಷರಾಗಿ ಹದಿನೈದಕ್ಕೂ ಹೆಚ್ಚು ದತ್ತಿ ನಿಧಿಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದ್ದಾಗಿದ್ದು ನಿಧನದಿಂದಾಗಿ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ.

ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗ ಹಾಗೂ ಸ್ನೇಹ ವೃಂದವನ್ನು ಅಗಲಿದ್ದಾರೆ. ಹುಟ್ಟೂರಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರಿನ ಅವರ ತೋಟದಲ್ಲಿ ಮೃತರ ಅಂತಿಮ ವಿಧಿವಿಧಾನ ಮಂಗಳವಾರ ಮಧ್ಯಾಹ್ನ ನೆರವೇರಿತು.

ಸಂತಾಪ : ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಗುರುಕುಲ ಶ್ರೀ ಇಮ್ಮಡಿಕರಿಬಸವೇಶ್ವರ ಸ್ವಾಮೀಜಿ, ಶಾಸಕ ಕೆ. ಷಡಕ್ಷರಿ, ಬಿಜೆಪಿ ಮುಖಂಡ ಲೋಕೇಶ್ವರ, ಎಸ್‌ವಿಪಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ರಾಜಶೇಖರ್, ಸಾಹಿತಿಗಳಾದ ಕೆ.ಎನ್. ರೇಣುಕಯ್ಯ, ಗಂಗಾಧರಯ್ಯ, ದಿಬ್ಬದಹಳ್ಳಿ ಶ್ಯಾಮಸುಂದರ್, ಸಿದ್ಧರಾಮಯ್ಯ, ಶಿಕ್ಷಕ ಗಂಗಣ್ಣನವರು ಸೇರಿದಂತೆ ತಾಲೂಕಿನ ಕಸಾಪ, ಶಸಾಪ, ಕಾರ್ಯನಿರತ ಪತ್ರಕರ್ತರ ಸಂಘ ತಿಪಟೂರು ಸೇರಿದಂತೆ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಮಾಜಗಳ ಬಂಧುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.