Friday, 13th December 2024

ರತ್ನಾ ಮಾಮನಿ ನಾಮಪತ್ರ ಅಂಗೀಕಾರ

ಬೆಳಗಾವಿ: ತೀವ್ರ ಕುತೂಹಲ ಮೂಡಿಸಿದ್ದ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಕೊನೆಗೂ ಅಂಗೀಕಾರವಾಗಿದೆ.

ರತ್ನಾ ಮಾಮನಿ ಅವರು ನಾಮಪತ್ರದ ಸೆಟ್ ಜತೆ ಸಲ್ಲಿಸಿದ್ದ ನಮೂನೆ 26ರಲ್ಲಿ ಗೊಂದಲ ವಿದೆ. 2018 ರ ಮಾದರಿಯ ( ಹಳೆಯ ಮಾದರಿಯ ) ಫಾರಂ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್​ ವೈದ್ಯ ಹಾಗೂ ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ ಆಕ್ಷೇಪಣೆ ಸಲ್ಲಿಸಿದ್ದರು.

ಆ ಹಿನ್ನೆಲೆಯಲ್ಲಿ ಸವದತ್ತಿ ಕ್ಷೇತ್ರದ ಚುನಾವಣಾ ಅಧಿಕಾರಿ ರಾಜೀವ ಕೂಲೇರ ಈ ಬಗ್ಗೆ ಶುಕ್ರವಾರದಿಂದಲೇ ವಿಚಾರಣೆ ನಡೆಸಿದ್ದರು. ಇದರಿಂದ ಬಿಜೆಪಿ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಶನಿವಾರ ವಿಚಾರಣೆ ಆರಂಭವಾಗಿತ್ತು. ಈ ವೇಳೆ ರತ್ನಾ ಮಾಮನಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯ ನಂತರ ಚುನಾವಣಾಧಿಕಾರಿ ಡಾ.ರಾಜೀವ ಕೊಲೇರ್ ತೀರ್ಪು ನೀಡಿದ್ದು, ರತ್ನಾ ಮಾಮನಿ ಅವರ ನಾಮಪತ್ರ ಸ್ವೀಕಾರ್ಹ ಎಂದು ಘೋಷಣೆ ಮಾಡಿದ್ದಾರೆ.

ತಮ್ಮ ನಾಮಪತ್ರ ಸ್ವೀಕಾರ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ರತ್ನಾ ಮಾಮನಿ, “ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಆತಂಕ ಇರಲಿಲ್ಲ. ನಮ್ಮ ಯಜಮಾನರು ನೇರಾನೇರ ರಾಜಕಾರಣ ಮಾಡಿದ್ದರು. ನಾನು ಕೂಡ ಅದೇ ದಾರಿಯಲ್ಲಿ ನಡೆಯುತ್ತಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ” ಎಂದರು. ಚುನಾವಣಾ ಸಮಯದಲ್ಲಿ ಈ ರೀತಿ ವಿರೋಧಿಗಳು ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ್ದಾರೆ. ಇದು ಸರಿಯಲ್ಲ. ಚುನಾವಣಾ ಕಣದಲ್ಲಿ ಫೇಸ್ ಟೂ ಫೇಸ್ ಫೈಟ್ ಮಾಡಲಿ ಎಂದು ವಿರೋಧಿಗಳಿಗೆ ರತ್ನಾ ಮಾಮನಿ ಸವಾಲು ಹಾಕಿದರು.