Sunday, 15th December 2024

ನನ್ನ ಹತ್ಯೆಗೆ ಸುಪಾರಿ: ಮಣಿಕಂಠ ರಾಠೋಡ ಆರೋಪ

ಕಲಬುರಗಿ: ಕಾಂಗ್ರೆಸ್ ಶಾಸಕ  ಪ್ರಿಯಾಂಕ ಖರ್ಗೆ ಅವರು ನನ್ನ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಶಿವಲಿಂಗಪ್ಪ ಎನ್ನುವ ವ್ಯಕ್ತಿಯಿಂದ ಎರಡು ವಿದೇಶಿ ಪಿಸ್ತೂಲ್ ಹಾಗೂ 30 ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿದೆ. ಆರೋಪಿತನ ವಿಚಾರಣೆ ವೇಳೆ ಶಾಸಕನ ಸಹಚರನ ಹೆಸರು ಹೇಳಿದ್ದಾನೆ. ಆದ್ದರಿಂದ ನನಗೆ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಅವರ ಬೆಂಬಲಿಗರಿಂದ ಜೀವ ಭಯವಿದೆ ಎಂದು ಹೇಳಿದರು.

ಪ್ರಕರಣವನ್ನು ಅಲ್ಲಿಗೆ ಮುಚ್ಚಿ ಹಾಕಲು ಆರೋಪಿತನಿಗೆ ಪಿಸ್ತೂಲ್ ವಾಪಾಸ್ ನೀಡಲಾಗಿದ್ದು, ಪೊಲೀಸ್ ಇಲಾಖೆ ಅಧಿಕಾರಿ ಇದರಲ್ಲಿ ಶಾಮೀಲಾಗಿದ್ದಾರೆ. ನಮಗೆ ಎಷ್ಟೆ ಜೀವ ಭಯ ಬಂದರೂ ನಾವು ಸಮಾಜ ಸೇವೆ ನಿಲ್ಲಿಸಲ್ಲ ಎಂದು ಹೇಳಿದರು.

ಕಳೆದ ತಿಂಗಳು ವಾಡಿಯಲ್ಲಿ ಪೋಸ್ಟರ್ ಪಾಲಿಟಿಕ್ಸ್ ನಡೆದ ನಂತರ ನಿಮ್ಮನ್ನು ಮುಗಿಸಲು ಸಂಚು ರೂಪಿಸಿದ್ದಾರೆ. ಅದರಂತೆ ನೀವು 30ರ ವರೆಗೆ ಹುಷಾರಾಗಿರಿ ಎಂದು ಖುದ್ದು ಪೊಲೀಸ್ ಇಟಲಿಜೆನ್ಸ್ ಅಧಿಕಾರಿ ದೂರವಾಣಿ ಮುಖಾಂತರ ನನ್ನ ಜತೆಗಿರುವ ಅಶ್ವಥ ಅವರಿಗೆ ತಿಳಿಸಿದ್ದಾರೆ. ಅಲ್ಲದೆ ರಾಠೋಡನನ್ನು ಮುಗಿಸಲು ವಿಜಯಪುರ ಅಥವಾ ಸೋಲ್ಲಾಪುರ ಗ್ಯಾಂಗ್‌ಗೆ ಹೇಳಲಾಗಿದೆ ಎಂದು ಹೇಳಿದರು.

ಚಿತ್ತಾಪುರದಲ್ಲಿ ಇತ್ತೀಚೆಗೆ ಖರೀದಿ ಮಾಡಿದ್ದ ಸ್ಥಳದ ಬಗ್ಗೆ ಗೊಂದಲ ಸೃಷ್ಟಿಸಿ ಹತ್ಯೆ ಮಾಡಲು ಸಂಚು ರೂಪಿಸಲಾಗಿದ್ದು, ಎಲ್ಲೂ ರಾಜಕೀಯ ವಾಸನೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಈ ವಿಷಯ ಮುಖ್ಯಮಂತ್ರಿ, ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ. ಇಷ್ಟೆಲ್ಲ ಸಂಚು ನಡೆದರೂ ಪೊಲೀಸ್ ಇಲಾಖೆ ನನಗೆ ರಕ್ಷಣೆ ನೀಡುತ್ತಿಲ್ಲ ಎಂದು ಹೇಳಿದರು.