Thursday, 24th October 2024

Reliance: ಕೃತಕ ಬುದ್ಧಿಮತ್ತೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದ ರಿಲಯನ್ಸ್- ಎನ್‌ವಿಡಿಯಾ

Reliance

ಮುಂಬೈ: ಭಾರತಕ್ಕೆ ಕೃತಕ ಬುದ್ಧಿಮತ್ತೆಯನ್ನು (Artificial Intelligence) ತರಲು ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಜಾಗತಿಕ ಕಂಪನಿಯಾದ ಎನ್ ವಿಡಿಯಾದ ಮುಖ್ಯಸ್ಥ ಜೆನ್ ಶೆಂಗ್ ಹುವಾಂಗ್ ಹಾಗೂ ರಿಲಯನ್ಸ್ (Reliance) ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಘೋಷಣೆ ಮಾಡಿದ್ದಾರೆ.

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಬ್ಬರೂ ಈ ಘೋಷಣೆ ಮಾಡಿದ್ದು, ಅಲ್ಲಿ ‘ಎನ್ ವಿಡಿಯಾ ಸಮ್ಮಿಟ್ ಇಂಡಿಯಾ’ ಕಾರ್ಯಕ್ರಮ ನಡೆಯುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ಜಿಯೋ ಈಗ ವಿಶ್ವದ ಅತಿದೊಡ್ಡ ಡೇಟಾ ಕಂಪನಿಯಾಗಿದೆ ಎಂದರು. ಎನ್ ವಿಡಿಯಾ (Nvidia) ಸಂಸ್ಥಾಪಕ ಮತ್ತು ಸಿಇಒ ಜೆನ್ ಶೆಂಗ್ ಹುವಾಂಗ್ ಅವರು, ರಿಲಯನ್ಸ್ ಮತ್ತು ಎನ್ ವಿಡಿಯಾ ಒಟ್ಟಾಗಿ ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯವನ್ನು ಸೃಷ್ಟಿಸುತ್ತವೆ ಎಂದು ಘೋಷಿಸಿದರು. ಈ ಪಾಲುದಾರಿಕೆಯು ಭಾರತವನ್ನು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಲಿದೆ.

ಈ ಸುದ್ದಿಯನ್ನೂ ಓದಿ | Indian economy: ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಐಎಂಎಫ್‌

ದೇಶ ಇಂದು ಡಿಜಿಟಲ್ ಕ್ರಾಂತಿಯ ಹೊಸ ಯುಗ ಪ್ರವೇಶಿಸುತ್ತಿದೆ

ಜೆನ್ ಶೆಂಗ್ ಹುವಾಂಗ್ ಅವರನ್ನು ಭಾರತಕ್ಕೆ ಸ್ವಾಗತಿಸಿದ ಮುಕೇಶ್ ಅಂಬಾನಿ, ಭಾರತದ ದೊಡ್ಡ ಕನಸುಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದಾಗಿ ದೇಶವು ಇಂದು ಡಿಜಿಟಲ್ ಕ್ರಾಂತಿಯ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದರು.

ಎನ್ ವಿಡಿಯಾ ಸಂಸ್ಥಾಪಕ ಮತ್ತು ಸಿಇಒ ಜೆನ್ ಶೆಂಗ್ ಹುವಾಂಗ್ ಅವರು ಭಾರತವನ್ನು ಗಟ್ಟಿಯಾದ ತಂತ್ರಜ್ಞಾನದ ಕೇಂದ್ರವನ್ನಾಗಿ ಮಾಡುವಲ್ಲಿ ಮುಕೇಶ್ ಅಂಬಾನಿಯವರ ಪ್ರಯತ್ನಗಳನ್ನು ಶ್ಲಾಘಿಸಿದರು. ಹುವಾಂಗ್ ಅವರು ಭಾರತದ ಐಟಿ ಕ್ಷೇತ್ರದ ಸಾಮರ್ಥ್ಯವನ್ನು ಮೆಚ್ಚಿದರು, “ಕಂಪ್ಯೂಟರ್ ಸೈನ್ಸ್ ಮತ್ತು ಐಟಿ ಕ್ಷೇತ್ರದಲ್ಲಿ ತರಬೇತಿ ಪಡೆದ ಹಲವಾರು ಜನರಿರುವ ವಿಶ್ವದ ಕೆಲವೇ ದೇಶಗಳಿವೆ” ಎಂದು ಹೇಳಿದರು.

ಜೆನ್ ಶೆಂಗ್ ಹುವಾಂಗ್ ಮಾತನಾಡಿ, “ಇದು ಅಸಾಧಾರಣ ಸಮಯ, ಅಲ್ಲಿ ಭಾರತವು ಹೆಚ್ಚಿನ ಸಂಖ್ಯೆಯ ಕಂಪ್ಯೂಟರ್ ಎಂಜಿನಿಯರ್‌ಗಳು ಮತ್ತು ಅಪಾರ ಜನಸಂಖ್ಯೆಯನ್ನು ಹೊಂದಿದೆ. ಈ ಪಾಲುದಾರಿಕೆಯಲ್ಲಿ ಮುಕೇಶ್ ಅಂಬಾನಿ ಅವರೊಂದಿಗೆ ಕೆಲಸ ಮಾಡಲು ನನಗೆ ಹೆಮ್ಮೆ ಎನಿಸುತ್ತದೆ” ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | BRICS Summit: ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸಿದ ಪುಟಿನ್; ಬ್ರಿಕ್ಸ್‌ ದೇಶಗಳಿಗೆ ಮಾದರಿ ಎಂದ ರಷ್ಯಾ ಅಧ್ಯಕ್ಷ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಪ್ರಯೋಜನಗಳು ಪ್ರತಿ ಭಾರತೀಯರನ್ನು ತಲುಪುವುದು ಮಾತ್ರವಲ್ಲದೆ ಅದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಬೇಕು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮುಕೇಶ್ ಅಂಬಾನಿ ಅವರು ಜೆನ್ ಶೆಂಗ್ ಹುವಾಂಗ್ ಜತೆಗಿನ ಸಂವಾದದಲ್ಲಿ ಹೇಳಿದರು.

ಜನರು ತಮ್ಮ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ ಎಐ ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ ಮುಕೇಶ್ ಅಂಬಾನಿ, ಈ ಹೊಸ ತಂತ್ರಜ್ಞಾನವನ್ನು ಜನರಿಗೆ ಸುಲಭವಾಗಿ ತಲುಪುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ನಾವು ಅದನ್ನು ಒಟ್ಟಾಗಿ ಸಾಧಿಸಬೇಕು ಎಂದರು.

ಎಐ ಜ್ಞಾನ ಕ್ರಾಂತಿ

ಎಐ ಜ್ಞಾನ ಕ್ರಾಂತಿಯಾಗಿದ್ದು, ಅದು ಜಾಗತಿಕ ಏಳಿಗೆಗೆ ದಾರಿ ತೆರೆಯುತ್ತದೆ ಎಂದು ತಿಳಿಸಿದ ಮುಕೇಶ್ ಅಂಬಾನಿ, ಭಾರತದಲ್ಲಿರುವ ಯುವ ಜನತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವು ದೇಶವನ್ನು ಡಿಜಿಟಲ್ ಸಮಾಜವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವು ವಿಶ್ವದ ಅತ್ಯಂತ ಕಿರಿಯ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತವು ವಿಶ್ವದ ನಾವೀನ್ಯತೆ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ ಮತ್ತು ನಾವು ವಿಶ್ವದ ಅತ್ಯುತ್ತಮ ಡಿಜಿಟಲ್ ಸಂಪರ್ಕ ಮೂಲಸೌಕರ್ಯವನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Job Guide: ಪವರ್‌ ಗ್ರಿಡ್‌ ಕಾರ್ಪೋರೇಷನ್‌ನಲ್ಲಿದೆ 802 ಹುದ್ದೆ; ಡಿಪ್ಲೊಮಾ ವಿದ್ಯಾರ್ಹತೆಯವರು ಅರ್ಜಿ ಸಲ್ಲಿಸಿ

ರಿಲಯನ್ಸ್ ಜಿಯೋ ಜಾಗತಿಕವಾಗಿ ಅತಿದೊಡ್ಡ ಡೇಟಾ ಕಂಪನಿಯಾಗಿದೆ. ಇದು ಪ್ರತಿ ಜಿಬಿಗೆ 15 ಸೆಂಟ್‌ಗಳ ಕಡಿಮೆ ವೆಚ್ಚದಲ್ಲಿ ಡೇಟಾವನ್ನು ಒದಗಿಸುತ್ತದೆ, ಆದರೆ ಅಮೆರಿಕಾದಲ್ಲಿ ಇದು ಪ್ರತಿ ಜಿಬಿಗೆ ಐದು ಡಾಲರ್ ಆಗಿದೆ ಎಂದು ಹೇಳಿದ ಅವರು, ಡೇಟಾದಲ್ಲಿ ಜಿಯೋ ಮಾಡಿದಂತೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಇದೇ ರೀತಿಯ ಕ್ರಾಂತಿಯನ್ನು ತರುವ ಅಗತ್ಯವಿದೆ ಎಂದು ಅವರು ತಿಳಿಸಿದರು.