Sunday, 15th December 2024

ರಿಲಯನ್ಸ್ ಕಂಪನಿಗೆ ಫುಡ್ ಪಾರ್ಕ್ ಜಾಗ ಮಾರಾಟ ಹುನ್ನಾರ: ಹಾಲಪ್ಪ ಕಿಡಿ

ತುಮಕೂರು: ತುಮಕೂರು ನಗರವೂ ಸೇರಿದಂತೆ ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಗಮನ ಸೆಳೆಯಲು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ನೇತೃತ್ವದ ತಂಡ ಬುಧವಾರ ಇಸ್ರೋ, ವಸಂತನರಸಾಪುರ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ ಬಗ್ಗೆ ಸರಕಾರದ ಗಮನ ಸೆಳೆದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದ ತಂಡದ ಸದಸ್ಯರೊಂದಿಗೆ ಹಾಗೂ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿ ಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಕಳೆದ 7 ವರ್ಷಗಳ ಹಿಂದೆ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 120 ಎಕರೆಯಲ್ಲಿ ಆರಂಭಗೊಂಡ ಫುಡ್‌ ಪಾರ್ಕ್  ಪ್ರಧಾನಿ ನರೇಂದ್ರ ಮೋದಿಯವರು ಅಮೋಘ ಕಾರ್ಯಕ್ರಮ ನಡೆಸಿ ಉದ್ಘಾಟನೆ ಮಾಡಿ ಇಲ್ಲಿ ಸುಮಾರು 2 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ವಾಗ್ದಾನವನ್ನು ನೀಡಿದ್ದರು. 8 ವರ್ಷಗಳು ಕಳೆದರೂ ಸಹ ಉದ್ಯೋಗ ಸೃಷ್ಠಿಯಾಗಿಲ್ಲ ಎಂದರು.
ಫುಡ್‌ಪಾರ್ಕ್ ಸ್ಥಿತಿ ನೋಡಿದರೆ ರಿಲಯನ್ಸ್ ಕಂಪನಿಗೆ ಈ ಜಾಗವನ್ನು ಮಾರಾಟ ಮಾಡುವ ಹುನ್ನಾರಗಳು ನಡೆ ಯುತ್ತಿದ್ದು, ಇದಕ್ಕೆ ಅವಕಾಶ ನೀಡದೆ ಫುಡ್‌ಪಾರ್ಕ್ನಲ್ಲಿ 2 ಲಕ್ಷ ಉದ್ಯೋಗ ಸೃಷ್ಠಿ ಮಾಡಿ ನಿಮ್ಮ ಮಾತನ್ನು ಉಳಿಸಿಕೊಳ್ಳಿ, ಯಾವುದೇ ಕಾರಣಕ್ಕೂ ರಿಲಯನ್ಸ್ ಕಂಪನಿಗೆ ಮತ್ತು ಫ್ಯೂಚರ್ ಗ್ರೂಪ್ ಕಂಪನಿಗೆ ಮಾರಾಟ ಮಾಡಬೇಡಿ ನಮ್ಮ ಜಾಗವನ್ನು ಬೇರೆಯ ವರಿಗೆ ಮಾರಾಟ ಮಾಡಲು ಅವಕಾಶ ನೀಡಬೇಡಿ ಎಂದು  ಸಂಸದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು.
ಜಪಾನೀಸ್ ಟೂಲ್ ಪಾರ್ಕ್ 600 ಎಕರೆಯಿದ್ದು ಕೇವಲ 2 ಇಂಡಸ್ಟ್ರೀಸ್ ಮಾತ್ರ ಕಾರ್ಯಾರಂಭ ಮಾಡುತ್ತಿವೆ. ಫುಡ್‌ಪಾರ್ಕ್ 120 ಎಕರೆಯಿದ್ದು ಕೇವಲ 6  ಕಾರ್ಯಾರಂಭ ಮಾಡುತ್ತಿವೆ. ತುಮಕೂರು ಮೆಷಿನ್ ಟೂಲ್ ಪಾರ್ಕ್ ಸೆಂಟರ್ 500 ಎಕರೆಯಿದ್ದು ಕೇವಲ 2 ಶೆಡ್‌ಗಳನ್ನು ಹಾಕಲಾಗಿದೆ.
ಹೀಗೆ ಹತ್ತು ಹಲವು ಸಮಸ್ಯೆಗಳು ಕಳೆದ 9 ವರ್ಷಗಳಿಂದಲೂ ಜಿಲ್ಲೆಯ ಜನತೆಯಲ್ಲಿ ಕಾಡುತ್ತಿದ್ದು, ಒಟ್ಟಾರೆ ತುಮಕೂರು ಜಿಲ್ಲೆ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಗೊಳ್ಳುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ÷್ಯ ಎದ್ದು ಕಾಣುತ್ತಿದೆ ಹಾಗೂ ಇದಕ್ಕೆ ಪೂರಕವಾಗಿ ಅನುಷ್ಠಾನಗೊಳಿಸಬೇಕಿದ್ದ ರೈಲ್ವೆ, ನೀರಿನ ಪೂರೈಕೆ ಪ್ರಗತಿ ಕಾಣದೆ ಬರೀ ಭಾಷಣ, ಪತ್ರಿಕಾಗೋಷ್ಠಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.
ಹೆಚ್‌ಎಂಟಿ ಕಾರ್ಖಾನೆಯಲ್ಲಿ 2000 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದರಿಂದ 4000 ಕುಟುಂಬಗಳಿಗೆ ಜೀವನಾಧಾರವಾಗಿತ್ತು. ಹೆಚ್‌ಎಂಟಿ ಕಾರ್ಖಾನೆಯನ್ನು ಮುಚ್ಚಿ ಜಾಗವನ್ನು ಇಸ್ರೋಗೆ ಹಸ್ತಾಂತರಿಸಿ ಹಲವು ವರ್ಷಗಳೇ ಕಳೆದರು ಇಸ್ರೋ ಸಂಸ್ಥೆ ಮಾತ್ರ ಆರಂಭಗೊಂಡಿಲ್ಲ ಎಂದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶ ಅಸೋಸಿಯೇಷನ್ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಮಾತನಾಡಿ, ವಸಂತನರಸಾಪುರದಲ್ಲಿ ಮೂಲಭೂತ ಸೌಕರ್ಯಗಳಾದ ನೀರಿನ ವ್ಯವಸ್ಥೆ, ಶೌಚಾಲಯ, ರಸ್ತೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಆರಂಭಿಸಿ ಭದ್ರತೆ ಕಲ್ಪಿಸಿಕೊಟ್ಟರೆ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೂ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎಚ್‌ಎಂಟಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ರೇವಣ್ಣ ಸಿದ್ದಯ್ಯ,  ಕಾರ್ಯದರ್ಶಿ ಡಾ. ಹರೀಶ್, ಕೆಐಎಡಿಬಿ. ಇಇ ಟಿ.ಎಸ್ ಲಕ್ಷ್ಮೀಶ, ಟೂಡ ಮಾಜಿ ಅಧ್ಯಕ್ಷ ಸಿದ್ದಲಿಂಗೌಡ, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ, ಮಂಗಳಮ್ಮ, ಮಾಜಿ ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ, ಬಷೀರ್ ಅಹ ಮದ್, ನಿಸ್ಸಾರ್ ಅಹಮದ್, ತೇಶಿ ವೆಂಕಟೇಶ್, ಜಗದೀಶ್, ಮರಿಚೆನ್ನಮ್ಮ, ಚಂದ್ರಕಲ, ಯದು, ಡಾ. ರಾಘವೇಂದ್ರ, ಅಶ್ವತ್ಥನಾರಾಯಣ, ನಟರಾಜು, ದಿಲೀಪ್, ಗೀತಾ, ಸಾಹೇರ, ವಸುಂಧರ, ಜಯಶ್ರೀ ಮುಂತಾದವರು ಭಾಗವಹಿಸಿದ್ದರು.