Thursday, 12th December 2024

ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುತ್ತಿರುವುದು ದುರಂತ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ 

ತುಮಕೂರು: ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುತ್ತಿರುವುದು ಅತ್ಯಂತ ದುರಂತದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು.
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಮತ್ತು ದುರ್ಗಾಂಬಿಕ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ  ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರಿಗೆ ಶ್ರೀದೇವಿ ರಮಣ ಮಹರ್ಷಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪ್ರಸ್ತುತ ಹಿಂಸೆಗಳ ಮುಖಾಂತರ ಧರ್ಮ ಪ್ರತಿಪಾದಿಸುವುದನ್ನು ನೋಡುತ್ತಿದ್ದೇವೆ. ಹಲವು ಧರ್ಮಗಳಲ್ಲಿ ಮಾನವೀಯತೆಗೆ ಗೌರವವಿಲ್ಲ ಒಂದೇ ಧರ್ಮ ಇರುವ ರಾಷ್ಟ್ರಗಳಲ್ಲಿ ಹಿಂಸೆ ಹೆಚ್ಚಾಗುತ್ತಿದೆ, ಹಲವು ಧರ್ಮಗಳ ನಾಡಾಗಿರುವ ಭಾರತದಲ್ಲಿ ಜನರು ಸಹಿಷ್ಣುತೆಯಿಂದ ಬದುಕುತ್ತಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ, ಜೀವನ ದಲ್ಲಿ ಸಕಾರಾತ್ಮಕ ಆಲೋಚನೆ ಮೈಗೂಡಿಸಿಕೊಳ್ಳಬೇಕು, ಇಂದಿನ ಯುವಕರಿಗೆ ಉತ ಭವಿಷ್ಯ ಇದೆ, ರಾಜಕೀಯ, ಆರೋಗ್ಯ ಒಳಗೊಂಡ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಮಾನವೀಯತೆ, ಸರಳತೆ, ಶಿಸ್ತು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
 ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಮಾತನಾಡಿ, ಇಂದಿನ ಯುವಕರು ಭಾರತದ ಭವಿಷ್ಯ ರೂಪಿಸಲಿದ್ದಾರೆ. ಯುವ ಸಮೂಹ ತಮ್ಮ ಪ್ರತಿಭೆ ಅನಾವರಣಕ್ಕೆ ಸಿಕ್ಕ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಿಸಬೇಕು, ವೆಂಕಟಾಚಲಯ್ಯ ಅವರಂತಹ ಚಿಂತಕರು ಮತ್ತೊಬ್ಬರು ಇಲ್ಲ ಸಮಾಜದ ಅಭಿವೃದ್ಧಿಗೆ ಅವರ ಶ್ರಮ ಅಪಾರ ಎಂದರು.
ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ರಾಜಕೀಯ ವ್ಯವಸ್ಥೆ ಸುಧಾರಣೆಯಾಗಬೇಕು, ಪ್ರಸ್ತುತ ಇರುವ ಪರಿಸ್ಥಿತಿ ಬದಲಾಗಿ ಜನಸಾಮಾನ್ಯರು ರಾಜಕೀಯದಲ್ಲಿ ಭಾಗವಹಿಸಬೇಕು, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ರತ್ನಕಲಾ, ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ವೈದ್ಯಕೀಯ ನಿರ್ದೇಶಕ ಡಾ.ಎಂ.ರಮಣ್, ಡಾ.ಅಂಬಿಕಾ ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್ ಇತರರು ಇದ್ದರು.