Sunday, 15th December 2024

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ರಕ್ಷಣೆ

ಕೋಲಾರ: ಪಟ್ಟಣದ ಯುಕೆಪಿ ವ್ಯಾಪ್ತಿಯ ಕೃಷ್ಣಾ ನದಿ ಸೇತುವೆ ಹತ್ತಿರ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಪಟ್ಟಣದ ಮೀನುಗಾರ ಅಮೀನ್ ಸಾಬ್ ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ಜರುಗಿದೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೌರಾ ಬಿ ಗ್ರಾಮದ ವ್ಯಕ್ತಿ ಕಲ್ಲಪ್ಪ ಪಾಟೀಲ್ ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಕೃಷ್ಣಾ ನದಿಗೆ ಜಿಗಿದು ಆತ್ಮ ಹತ್ಯೆಗೆ ಯತ್ನಿಸುತ್ತಿದ್ದ ವೇಳೆ ಮೀನುಗಾರ ಅಮೀನ್ ಸಾಬ್ ಆತನ ಚಲನವಲನ ಗಮನಿಸಿ ಕೂಡಲೇ ಸೇತುವೆ ಮೇಲೆ ಆತನನ್ನು ಹಿಡಿದು ಕೊಲ್ಹಾರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪಿಎಸ್ಐ ಪ್ರೀಯತಮ್ ನಾಯಕ್ ಹಾಗೂ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ಆತನ ಕುಟುಂಬಸ್ಥರನ್ನು ಕರೆಯಿಸಿ ವ್ಯಕ್ತಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ಇನ್ನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಸೂಕ್ತ ಸಮಯಕ್ಕೆ ಧಾವಿಸಿ ಆತನನ್ನು ರಕ್ಷಿಸಿದ ಮೀನುಗಾರ ಅಮೀನ್ ಸಾಬ್ ಕಾರ್ಯವನ್ನು ಪೊಲೀಸ್ ಇಲಾಖೆಯಿಂದ ಶ್ಲಾಘೀಸಿ ಆತನನ್ನು ಕೊಲ್ಹಾರ ಪೊಲೀಸ್ ಠಾಣೆಯ ಗಣೇಶೋತ್ಸವ ಶಾಂತಿ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪಿಎಸ್ಐ ಪ್ರೀಯತಮ್ ನಾಯಕ್ ತಿಳಿಸಿದ್ದಾರೆ.