Thursday, 12th December 2024

Rahul Gandhi: ಮೀಸಲಾತಿ ವಿರುದ್ಧದ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

ತುಮಕೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಯವರು ದಲಿತರ ಮೀಸಲಾತಿ (Reservation) ನಿಲ್ಲಿಸುವ ವಿಚಾರವಾಗಿ ಹೇಳಿಕೆ ನೀಡಿ, ದಲಿತ ವಿರೋಧಿ ಧೋರಣೆ ತೋರಿದ್ದಾರೆ ಎಂದು ಅವರ ಹೇಳಿಕೆ ಖಂಡಿಸಿ ಬುಧವಾರ ಜಿಲ್ಲಾ ಬಿಜೆಪಿ ಎಸ್ಸಿ ಮತ್ತು ಎಸ್ಟಿ ಮೋರ್ಚಾದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮುಖಂಡರು ಪ್ರತಿಭಟನೆ ನಡೆಸಿದರು.

ಎಸ್.ಟಿ.ಮೋರ್ಚಾ (ST Morcha)ರಾಜ್ಯ ಕಾರ್ಯದರ್ಶಿ ಮಹಂತೇಶ ನಾಯಕ ಮಾತನಾಡಿ, ರಾಹುಲ್ ಗಾಂಧಿಯವರು ಅಮೇರಿಕ ಪ್ರವಾಸದಲ್ಲಿದ್ದ ವೇಳೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದು ಮಾಡುತ್ತೇವೆ. ಮೀಸಲಾತಿ ತೆಗೆದು ಹಾಕಿದರೆ ಮಾತ್ರ ದೇಶ ಉದ್ಧಾರ ಹೊಂದಲು ಸಾಧ್ಯ ಎಂಬ ದಲಿತ ವಿರೋಧಿ(Anti Dalit) ಹೇಳಿಕೆ ನೀಡಿರುವುದು ಖಂಡ ನಾರ್ಹ ಎಂದರು.

ಇದರೊಂದಿಗೆ ಕಾಂಗ್ರೆಸ್ ನಾಯಕರ ನಿಜಬಣ್ಣವನ್ನು ರಾಹುಲ್ ಗಾಂಧಿ ಬಯಲು ಮಾಡಿದ್ದಾರೆ. ಇದೂವರೆಗೆ ಕಾಂಗ್ರೆಸ್ ಪಕ್ಷ ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿತೇ ಹೊರತು, ದಲಿತರ ಏಳಿಗೆಗೆ ಕಾಳಜಿ ವಹಿಸಲಿಲ್ಲ, ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಆಡಳಿತದಲ್ಲಿ ದಲಿತ ವರ್ಗದ ಪರಿಸ್ಥಿತಿ ಸುಧಾರಣೆ ಆಗಲಿಲ್ಲ, ಮುಂದಿನ ಚುನಾವಣೆಗಳಲ್ಲಿ ದಲಿತರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ರಾಹುಲ್ ಗಾಂಧಿಯವರು ಸಂವಿಧಾನದ ಪುಸ್ತಕ ಹಿಡಿದುಕೊಂಡು ನಾವು ಸಂವಿಧಾನ ರಕ್ಷಕರು, ಬಿಜೆಪಿಯವರು ಸಂವಿಧಾನ, ದಲಿತ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ, ದಲಿತ ಸಮುದಾಯದವರು ಈಗ ಪ್ರಜ್ಞಾವಂತರಾಗಿದ್ದಾರೆ. ಕಾಂಗ್ರೆಸ್ ನಾಯಕರ ಸುಳ್ಳು ಮಾತುಗಳನ್ನು ನಂಬುವುದಿಲ್ಲ ಎಂದರು.

ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ದಲಿತರ ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನವರು ದಲಿತರ ಅಭಿವೃದ್ಧಿಗೆ ಮೀಸಲಾದ ಕೋಟ್ಯಾಂತರ ರೂ. ಹಣ ಲೂಟಿ ಮಾಡಿದ್ದಾರೆ. ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗಾಗಿ ಬಳಸಿಕೊಂಡು ಈ ಸಮುದಾಯಕ್ಕೆ ದ್ರೋಹ ಮಾಡಿ ದ್ದಾರೆ. ಪರಿಶಿಷ್ಟ ಜಾತಿಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.

ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮುಖಂಡರಾದ ಎಸ್.ಶಿವಪ್ರಸಾದ್, ಬಂಬೂ ಮೋಹನ್, ಹನುಮಂತರಾಯಪ್ಪ, ರಾಕೇಶ್, ಧನುಷ್ ನಾಯಕ್, ಸತ್ಯಮಂಗಲ ಜಗದೀಶ್, ಬೆಳಗುಂಬ ವೆಂಕಟೇಶ್, ಕೆ.ಎಸ್.ಕುಮಾರ್, ಜಿ.ಗಂಗಾಧರ್, ವೀರಣ್ಣ, ವೆಂಕಟೇಶಾಚಾರ್, ಸಣ್ಣರಂಗಯ್ಯ, ದಿಲೀಪ್ ಮೊದಲಾದವರು ಭಾಗವಹಿಸಿದ್ದರು. 

ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ: Tumkur News: ಸಂಸ್ಕೃತದ ಅಧ್ಯಯನದಿಂದ ವಿಜ್ಞಾನ ಕಲಿಯಲು, ಪ್ರಯೋಗ ಮಾಡಲು ಅನುಕೂಲ