ತುಮಕೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತುಮಕೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ 10ನೇ ಸ್ಥಾನಕ್ಕೇರಿಸಲು ಉಪನ್ಯಾಸಕರು ಗಳು ಮತ್ತಷ್ಟು ಉತ್ತಮವಾಗಿ ಬೋಧನೆ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ್ ಸಲಹೆ ನೀಡಿದರು.
ನಗರದ ಅನನ್ಯ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಸಭಾಂಗಣ ದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ.ಪೂ. ಶಿಕ್ಷಣ ಇಲಾಖೆ) ಹಾಗೂ ಇತಿಹಾಸ ವೇದಿಕೆ, ಜಿಲ್ಲಾ ಪ.ಪೂ. ಕಾಲೇಜುಗಳ ಇತಿಹಾಸ ಉಪನ್ಯಾಸಕರ ಬಳಗದ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಇತಿಹಾಸ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸಿ ರಾಜ್ಯದಲ್ಲಿ ತುಮಕೂರು ಜಿಲ್ಲೆಯನ್ನು 10ಸ್ಥಾನಕ್ಕೇರಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಮಕ್ಕಳಿಗೆ ಅತ್ಯುತ್ತವಾಗಿ ವ್ಯಾಸಂಗ ಮಾಡಲು ಸಹಕರಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಇತಿಹಾಸ ವಿಷಯದ ಕುರಿತು ಮನವರಿಕೆ ಮಾಡಿಕೊಡುವಂತೆ ತಿಳಿಸಲಾಗಿದೆ ಎಂದ ಅವರು, ಪ.ಪೂ. ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು ಪೋಷಕರನ್ನು ಸಂಪರ್ಕಿಸಿ ಮಕ್ಕಳ ಕಲಿಕೆ ಬಗ್ಗೆ ಚರ್ಚೆ ನಡೆಸಬೇಕು. ಇದು ಸಹ ಉತ್ತಮ ಫಲಿತಾಂಶ ಪಡೆಯಲು ಸಹಕಾರಿ ಯಾಗಲಿದೆ ಎಂದರು.
ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮಹಲಿಂಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಇತಿಹಾಸ ಉಪನ್ಯಾಸಕರಲ್ಲಿ ಪುನಶ್ಚೇತನ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಾಗಾರ ಉಪನ್ಯಾಸಕರುಗಳಿಗೆ ಬಹಳ ಉಪಯುಕ್ತವಾಗಿದೆ ಎಂದರು.
ಮಕ್ಕಳಿಗೆ ಅಂಕ ಗಳಿಕೋಸ್ಕರ ಹೆಚ್ಚಿನ ಒತ್ತಡ ಹಾಕುವುದರ ಬದಲು ಸಮಾಜದಲ್ಲಿ ಯಾವ ರೀತಿ ಉತ್ತಮ ಬದುಕು ರೂಪಿಸಿ ಕೊಳ್ಳಲು ಅಗತ್ಯ ಇರುವ ಜ್ಞಾನ ಬೆಳೆಸಿಕೊಳ್ಳುವ ಕಡೆಯೂ ತಿಳುವಳಿಕೆ ನೀಡಬೇಕಿದೆ. ಮಕ್ಕಳಿಗೆ ಅಂಕ ಗಳಿಕೆ ಒಂದೇ ಮಾನ ದಂಡವಲ್ಲ, ಮಕ್ಕಳಲ್ಲಿ ಬದುಕುವ ರೀತಿಯನ್ನು ಕಲಿಸಿಕೊಡುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ದೇಶ ಭಕ್ತಿ ಮೂಡಿಸಬೇಕು. ಆಗ ಮಾತ್ರ ಮಕ್ಕಳ ಕಲಿಕೆ ಅರ್ಥಪೂರ್ಣವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ 20 ಜನ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು ಹಾಗೂ ನಿವೃತ್ತ ಇತಿಹಾಸ ಉಪನ್ಯಾಸಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅನನ್ಯ ಶಿಕ್ಷಣ ಸಂಸ್ಥೆಯ ಡಾ. ಹರೀಶ್, ವಿಶ್ವವಿದ್ಯಾನಿಲಯ ಕಲಾ ವಿಭಾಗದ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ಟಿ.ಎನ್., ಉಪನ್ಯಾಸಕರ ಡಾ. ಜಿ.ವಿ. ಗೋಪಾಲ್ ಸೇರಿದಂತೆ ವಿವಿಧ ಕಾಲೇಜುಗಳ ಇತಿಹಾಸ ಉಪನ್ಯಾಸಕರುಗಳು ಭಾಗವಹಿಸಿ ದ್ದರು.