Friday, 13th December 2024

ತೊಗರಿ ಬೆಳೆಗೆ ನೆಟೆ ರೋಗ: ತಂಡದಿಂದ ಸಮೀಕ್ಷೆ

ಆಳಂದ: ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ತೊಗರಿಗೆ ನೆಟೆ ರೋಗ ಬಂದು ಶೇ.೮೦ ರಷ್ಟು ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿರುವುದರಿಂದ ರೈತರು ಈ ವರ್ಷವೂ ಆರ್ಥಿಕ ಸಂಕಷ್ಟ ಎದುರಿಸಲಿದ್ದಾರೆ.

ಸತತ ಎರಡು ವರ್ಷಗಳಿಂದ ಮಳೆ ಚೆನ್ನಾಗಿ ಆಗುತ್ತಿದೆ, ಒಂದು ರೀತಿಯಲ್ಲಿ ಅತೀವೃಷ್ಟಿ ಯಾಗಿದೆ. ಖರೀಫ್ ಬೆಳೆಗಳಾದ ಉದ್ದು ಹೆಸರು ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆಯಲು ಮಳೆ ಅನುವು ಮಾಡಿಕೊಡಲಿಲ್ಲ. ತೊಗರಿಯಾದರೂ ಬೆಳೆಯೋಣ ಅದರಲ್ಲಿಯಾದರೂ ಬದುಕು ಸಾಗಿಸೋಣ ಎಂದು ತೊಗರಿ ಬೆಳೆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ವೆಂಬಂತೆ ಹೂವು ಬಿಟ್ಟು ಕಾಯಿ ಯಾಗುವ ಸಂದರ್ಭದಲ್ಲಿಯೇ ತೊಗರಿಗೆ ನೆಟೆ ರೋಗ ಬಂದು ಒಣಗಿ ನಿಂತಿದೆ.

ಮಾದನ ಹಿಪ್ಪರಗಿ ವಲಯದಲ್ಲಿ ಶೇ.೮೦ ರಷ್ಟು ತೊಗರಿ ನಾಶವಾಗಿದೆ. ೨೬೮೯೮ ಹೆಕ್ಟೇರ್ ಪ್ರದೇಶದಲ್ಲಿ ೨೫೧೬೪ ಹೆಕ್ಟೇರನಷ್ಟು ಬಿತ್ತನೆ ಯಾದರೆ ಅದರಲ್ಲಿ ೧೮೨೪೩ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.  ತೊಗರಿ ಬೀಜಗಳಾದ ಟಿ.ಎಸ್೩, ಜಿಆರ್‌ಜಿ ೮೧೧ ಅಲ್ಲದೆ ಸ್ಥಳೀಯ ಬೀಜಗಳನ್ನು ಉಪಯೋಗಿಸಿ ಬಿತ್ತನೆ ಮಾಡಿದ್ದಾರೆ. ಇದರಲ್ಲಿ ಶೇ. ೮೦ ರಷ್ಟು ತೊಗರಿ ನೆಟೆ ರೋಗಕ್ಕೆ ತುತ್ತಾಗಿರುವದರಿಂದ ರೈತರ ಮುಖ ಕಳೆಗುಂದಿವೆ.

ಕಳೆದ ವರ್ಷವೂ ಕೂಡಾ ತೊಗರಿ ನಿರೀಕ್ಷಿತ ಮಟ್ಟದಲ್ಲಿ ಲಾಭ ತರಲಿಲ್ಲ. ನೆಟೆ ರೋಗಕ್ಕೆ ತುತ್ತಾದ  ಗಿಡದ ಎಲೆಗಳು ಹಳದಿಯಾಗಿ, ಬಾಡಿ ಜೊತು ಬಿದ್ದು, ಒಣಗಿ ಕೆಳಗೆ ಉದರದೆ ಗಿಡಕ್ಕೆ ಅಂಟಿಕೊ೦ಡಿರುತ್ತವೆ. ಗಿಡದ ಬೇರುಗಳು ಪೂರ್ತಿಯಾಗಿ ಬಾಡಿರುತ್ತವೆ. ಆದರೆ ಕಾಂಡವನ್ನು ಸೀಳಿ ನೋಡಿದಾಗ ನೀರು ಸಾಗಾಣಿಕೆಯ ಅಂಗಾ೦ಶವು ಕಪ್ಪಾಗಿರುವುದು ನಿಖರವಾಗಿ ಕಂಡು ಬರುತ್ತದೆ. ತಂಪಾದ ವಾತಾವರಣದಲ್ಲಿ ಒಣಗಿದ ಗಿಡದ ಕಾಂಡದ ಮೇಲೆ ಗುಲಾಬಿ ಬಣ್ಣದ ಶೀಲಿಂದ್ರದ ಬೆಳವಣಿಗೆ ಕಾಣಿಸುವುದು. ಅರ್ದ ಸಿಡಿಯಾದ ಗಿಡದ ಕಾಂಡದ ಮೇಲೆ ಕಂದು ಅಥವಾ ಕಡು ನೇರಳೆ ಬಣ್ಣದ ಪಟ್ಟಿಗಳು ಭೂಮಿಯ ಮಟ್ಟದಿಂದ ಮೇಲಕ್ಕೆ ಹಬ್ಬಿರುವುದು ಕಂಡುಬರುವುದು.

ಆರಂಭದಲ್ಲಿಯೇ ಇದರ ಹತೋಟಿಗೆ ಟ್ರೆಂಕೋಡರ್ಮಾ ಪುಡಿ (೫ ಗ್ರಾಂ ಪ್ರತಿ ಲೀಟರಗೆ ನೀರಿಗೆ) ಬೇರಿಸಿ ಸಿಂಪರಣೆಯನ್ನು ಕಾಂಡದ ಬುಡಕ್ಕೆ ಹಸಿಯಾಗುವವರೆಗೆ ಸುರಿಯುವುದು. ಅಥವಾ ಸಾಫ್ (೫ ಗ್ರಾಂ ಪ್ರತಿ ಲೀಟರಗೆ ನೀರಿಗೆ) ಬೇರಿಸಿ ಸಿಂಪರಣೆ ಯನ್ನು ಕಾಂಡದ ಬುಡಕ್ಕೆ ಹಸಿಯಾಗುವವರೆಗೆ ಸುರಿಯುವುದು ಅಥವಾ ಸಾಧ್ಯವಾದರೆ ನೀರಾವರಿ ಸೌಲಭ್ಯವಿರುವ ಕಡೆ ಬೆಳೆಗಳಿಗೆ ನೀರು ಹರಿಸುವುದು. ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ಜೋಳ ಅಥವಾ ಮುಸುಕಿನ ಜೋಳ ಮತ್ತು ತೊಗರಿ ಮಿಶ್ರ/ಅಂತರ ಬೆಳೆಯಲ್ಲಿ ಸೊರಗು ರೋಗದ ಭಾದೆ ಕಡಿಮೆ ಇರುತ್ತದೆ.

ಜಿಲ್ಲೆಯ ಜಿಲ್ಲಾ ಜಂಟಿ ನಿದೇರ್ಶಕರು ಕಲಬುರಗಿ, ಉಪ ಕೃಷಿ ನಿರ್ದೇಶಕರು-೧ ಕಲಬುರಗಿ, ಹಾಗೂ ಸಹಾಯಕ ಕೃಷಿ ನಿರ್ದೇ ಶಕರು ಕಲಬುರಗಿ ಇವರುಗಳ ಜೊತೆಯಲ್ಲಿ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳ ತಂಡದೊಂದಿಗೆ ವೈಜ್ಞಾನಿಕ ಸಮೀಕ್ಷೆ ನಡೆಸಿದರು. ಆಳಂದ ತಾಲೂಕಿನ ಲಾಡಚಿಂಚೋಳಿ ಆಳಂದ ಇನ್ನಿತರ ಗ್ರಾಮದ ತೊಗರಿ ಬೆಳೆ ಕ್ಷೇತ್ರಗಳಿಗೆ ಬೇಟಿ ನೀಡಿ ತಾಂತ್ರಿಕ ಪರಿಶೀಲನೆ ನಡೆಸಿದರು.