Saturday, 26th October 2024

ಹಕ್ಕುಗಳನ್ನು ನಮ್ಮದಾಗಿಸಿಕೊಳ್ಳಲು ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು: ನ್ಯಾ.ರಾಘವೇಂದ್ರ ಶೆಟ್ಟಿಗಾರ್

ತುಮಕೂರು: ಸಾಮಾನ್ಯವಾಗಿ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. ಅದು ನಮ್ಮ ಜವಾಬ್ಧಾರಿಯೂ ಹೌದು ಆದರೆ ನಮ್ಮ ಕರ್ತವ್ಯಗಳನ್ನು ಸರಿಯಾಗಿ ಮತ್ತು ಸರಿಯಾದ ಸಮಯದಲ್ಲಿ ನಿಭಾಯಿಸಿದಾಗ ನಮ್ಮ ಹಕ್ಕು ನಮಗೆ ಲಭಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಗಾರ್ ಅವರು ಆಭಿಪ್ರಾಯ ಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋರ, ಡಮರುಗ ರಂಗಸಂಪನ್ಮೂಲ ಕೇಂದ್ರ ಹಾಗೂ ಗ್ರಾಮ ಪಂಚಾಯತ್‍ ಕೋರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೋರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಆಚರಣೆಯಲ್ಲಿ ಭಾಗವಹಿಸಿ ಸಸಿ ನೆಟ್ಟು ಮಾತನಾಡಿದರು.
ಮಕ್ಕಳಿಗೆ ಅಸಾಮಾನ್ಯ ಸೃಜನಶೀಲತೆಯ ಗುಣ ಇದೆ. ಆ ಗುಣವನ್ನು ಬಳಸಿ ತಮ್ಮದೇ ತಂತ್ರಗಳನ್ನು ಬಳಸಿ ಮಾಲಿನ್ಯವನ್ನು ನಿಯಂರ್ತಿಸುವ ಹೊಸ ಕೌಶಲಗಳನ್ನು ರೂಢಿಸಿಕೊಂಡು ಪರಿಸರವನ್ನು ಜೋಪಾನವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಮಕ್ಕಳಿಗೆ ಕರೆ ನೀಡಿದರು.
ಮಹಾನಗರ ಪಾಲಿಕೆ  ಆರೋಗ್ಯಾಧಿಕಾರಿ ರಕ್ಷಿತ್‍ ಮಾತನಾಡಿ,  ಮಕ್ಕಳು ತಮ್ಮ ಚಿಕ್ಕವಯಸ್ಸಿನಲ್ಲೇ ಪರಿಸರ ಸ್ನೇಹಿ ಮನೋಭಾವ ಬೆಳೆಸಿಕೊಂಡರೆ ಪರಿಸರವು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿರುತ್ತದೆ. ಆರೋಗ್ಯಕರ ಆಹಾರ ಅಭ್ಯಾಸ, ಆಹಾರವನ್ನು ವ್ಯರ್ಥ ಮಾಡದಿರುವ ಗುಣ, ಜಂಕ್‍ ಫುಡ್‍ಅನ್ನು ವರ್ಜಿಸುವ ಗುಣಗಳನ್ನು ಮೈಗೂಡಿಸಿಕೊಂಡು ಪಾಲಿಸಿದರೆ ಉತ್ತಮ ವ್ಯಕ್ತಿಗಳಾಗಿ ಸಮಾಜ ಮತ್ತು ಪರಿಸರವನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಎಸ್‍.ಡಿ.ಎಂ.ಸಿ ಉಪಾಧ್ಯಕ್ಷರಾದ ಯಶೋದಮ್ಮ, ಗ್ರಾಮದ ಮುಖಂಡರಾದ ದೇವರಾಜು, ಎಸ್‍.ಐ.ಟಿ ಬಳಗದ ಚಿದಾನಂದ್‍, ಹರ್ಷ ಅವರು ಉಪಸ್ಥಿತರಿದ್ದರು. ಮಕ್ಕಳಿಗೆ ಆದರ್ಶ ಸ್ಪೆಷಾಲಿಟಿ ಕೆಮಿಕಲ್‍ ಪ್ರೈ ಲಿಮಿಟೆಡ್‍ ವತಿಯಿಂದ ಬಹು ಮಾನ ಮತ್ತು ಸಿಹಿತಿಂಡಿಯ ಪ್ರಾಯೋಜಕತ್ವವನ್ನು ವಹಿಸಿಕೊಂಡು ಎಲ್ಲ ಮಕ್ಕಳಿಗೂ ಸಿಹಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಡಮರುಗ ಉಮೇಶ್‍ ಅವರು ಪರಿಸರ ಗೀತೆ ಹಾಡಿದರು. ಶಾಲೆಯ ಮುಖ್ಯ ಶಿಕ್ಷಕರಾದ ಮಧುಸೂದನರಾವ್‍ ಅವರ ಸ್ವಾಗತಮಾಡಿದರು. ಶಿಕ್ಷಕರಾದ ಸೀತಾಲಕ್ಷ್ಮಿ ವಂದಿಸಿದರೆ ಶಿಕ್ಷಕರಾದ ವಿಶ್ವನಾಥ್‍ ಅವರು ಕಾರ್ಯಕ್ರಮ ನಿರೂಪಿಸಿದರು.