Thursday, 12th December 2024

ದಿನಸಿ ಅಂಗಡಿಗಳ ಬೀಗ ಮುರಿದು ಸಿಗರೇಟ್, ನಗದು ಕಳ್ಳತನ

ಗುಬ್ಬಿ: ಪಟ್ಟಣ ಸೇರಿದಂತೆ ಸಿಂಗೋನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದು ರೈತರ ಟ್ರಾಕ್ಟರ್ ಹಾಗೂ ಜೆಸಿಬಿ ಬ್ಯಾಟರಿ ಬಿಚ್ಚಿರುವುದು ಸೇರಿದಂತೆ ಪಟ್ಟಣದ ಎರಡು ದಿನಸಿ ಅಂಗಡಿಗಳ ಬೀಗ ಮುರಿದು ಸಿಗರೇಟ್ ಹಾಗೂ ನಗದು ಕದ್ದಿದ್ದಾರೆ.

ಕಳೆದ ೨೦ ದಿನದ ಹಿಂದೆ ತಹಶೀಲ್ದಾರ್ ಮನೆಗೆ ಕನ್ನ ಹಾಕಿದ ಘಟನೆ ನಂತರ ಸರಣಿ ಕಳ್ಳತನಕ್ಕೆ ಗುಬ್ಬಿ ಸಾಕ್ಷಿಯಾಗುತ್ತಿದೆ ಎನ್ನುವ ಸಾರ್ವಜನಿಕ ಚರ್ಚೆ ನಡೆದಿದೆ.

ಪಟ್ಟಣದ ಎಂಜಿ ರಸ್ತೆಯ ಸಗಟು ವ್ಯಾಪಾರಿಯ ೪೦ ಸಾವಿರ ಸಿಗರೇಟ್ ಹಾಗೂ ೫ ಸಾವಿರ ನಗದು ದೋಚಿದ್ದಾರೆ. ಮತ್ತೊಂದು ಮಾರ್ಕೆಟ್ ರಸ್ತೆಯ ದಿನಸಿ ಅಂಗಡಿ, ಹೆದ್ದಾರಿ ಯಲ್ಲಿನ ಫ್ಯಾನ್ಸಿ ಸ್ಟೋರ್ ಅಂಗಡಿಗಳಿಗೆ ವಿಫಲ ಯತ್ನ ನಡೆದಿದೆ. ವಾರದ ಹಿಂದೆ ಹೇಮಾವತಿ ಕ್ವಾಟ್ರಸ್ ನಲ್ಲಿ ಮನೆಯಲ್ಲಿ ನಿಗೂಢವಾಗಿ ಲಕ್ಷಾಂತರ ರೂಗಳ ಚಿನ್ನಾಭರಣ ಮಾಯವಾಗಿದ ಪ್ರಕರಣ ಸಹ ಈ ಸರಣಿಗೆ ಸೇರುತ್ತಿದೆ ಎಂದು ಸಾರ್ವಜನಿಕ ಚರ್ಚೆ ನಡೆದಿದೆ.

ಗುಬ್ಬಿ ಸಮೀಪದ ಸಿಂಗೋನಹಳ್ಳಿ ಗ್ರಾಮದಲ್ಲಿ ಜೆಸಿಬಿ ಸೇರಿದಂತೆ ಆರು ಟ್ರಾಕ್ಟರ್ ಗಳ ಬ್ಯಾಟರಿಗಳನ್ನು ಕಳಚಲಾಗಿದೆ. ಸುಮಾರು ಐವತ್ತು ಸಾವಿರ ರೂಗಳ ಬೆಲೆ ಬಾಳುವ ಬ್ಯಾಟರಿ ಕದ್ದಿರುವುದು ಗ್ರಾಮೀಣ ಭಾಗದ ರೈತರಿಗೆ ಅಚ್ಚರಿ ತಂದಿದೆ. ಮನೆ ಮುಂದೆ ನಿಲ್ಲಿಸಿದ ಟ್ರಾಕ್ಟರ್ ಗಳು ಸುರಕ್ಷತೆ ಇಲ್ಲದಿರು ವುದು ವಿಪರ್ಯಾಸ. ಹೆದ್ದಾರಿ ಬದಿಯ ಗ್ರಾಮದಲ್ಲಿ ಈ ಘಟನೆ ಆತಂಕ ತಂದಿದೆ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೊಪ್ಪ ಗ್ರಾಮದಲ್ಲಿನ ದೇವಾಲಯಕ್ಕೂ ಕನ್ನ ಹಾಕಿ ಸುಮಾರು ೫೦ ಸಾವಿರ ನಗದು ದೋಚಿದ ಘಟನೆ ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಕಳೆದ ಇಪ್ಪತ್ತು ದಿನದಲ್ಲಿ ನಡೆದ ಸರಣಿ ಕಳ್ಳತನಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.