Sunday, 15th December 2024

ಸಾಹಿತ್ಯ ಪರಿಷತ್ತ ಜನ ಪರಿಷತ್ತನ್ನಾಗಿ ಬದಲಾಗಲಿ

ಚಿಕ್ಕನಾಯಕನಹಳ್ಳಿ: ಮುಂದಿನ ದಿನಗಳಲ್ಲಿ ಸಾಹಿತ್ಯ ಪರಿಷತ್ತನ್ನು ಜನ ಪರಿಷತ್ತನ್ನಾಗಿ ರೂಪಿಸುವ ಕಡೆ ಹೆಜ್ಜೆ ಇಡಬೇಕಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ಹೇಳಿದರು.
೧೦ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಿಮ್ಮನಹಳ್ಳಿ ನನ್ನ ಜನ್ಮಭೂಮಿಯಾದರೂ, ಶಿರಾ ಕರ್ಮಭೂಮಿಯಾಗಿತ್ತು. ಚಿಕ್ಕನಾ ಯಕನಹಳ್ಳಿ ತಾಲೂಕಿನ ಸಾಹಿತ್ಯ ಸಮ್ಮೇಳ ನಾಧ್ಯಕ್ಷ ಸ್ಥಾನದ ಗೌರವ ನೀಡಿ ಇಷ್ಟೊಂದು ವಾತ್ಸಲ್ಯ ತೋರಸಿದ್ದೀರಿ. ಈಗ ಸ್ವಲ್ಪ ಬದಲಾವಣೆ ಮಾಡಿಕೊಂಡು ಸಮ್ಮೇಳನದಲ್ಲಿ ಚರ್ಚೆಗೆ ಗ್ರಾಸವಾದ ತಾಲೂಕು ಎದುರಿಸುತ್ತಿರುವ ಕೊರತೆಗಳನ್ನು ಪರಿಷತ್ತಿನ ಮುಖೇನ ವಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡೋಣ ಎಂದರು.
ಮಾಜಿ ಶಾಸಕ ಸಿ.ಬಿ. ಸುರೇಶ್ಬಾಬು ಮಾತನಾಡಿ, ನಿಷ್ಪಕ್ಷಪಾತದಿಂದ ಕನ್ನಡ ಕಟ್ಟುವ ಕೆಲಸ ಆಗಬೇಕು. ನಾಡಿನ ಎಲ್ಲರೂ ಕನ್ನಡ, ಕನ್ನಡ ಸಂಸ್ಕೃತಿ ಉಳಿಸಿಕೊಂಡು ಹೋಗಲು ಪ್ರಯತ್ನಿಸೋಣ ಎಂದರು.
ಹಿರಿಯ ಸಾಹಿತಿ ಎಂ.ವಿ. ನಾಗರಾಜರಾವ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಹೋಬಳಿ ಮಟ್ಟದಲ್ಲೂ ಸಮ್ಮೇಳನಗಳನ್ನು ನಡೆಸಲಾಗಿದೆ. ರಾಜ್ಯದಲ್ಲೇ ಇದು ವಿಶೇಷ. ಸಾಹಿತ್ಯ ಪರಿಷತ್ತನ್ನು ಜನ ಪರಿಷತ್ತನ್ನಾಗಿ ಮಾಡಲೇಬೇಕು. ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ತಮಗೆ ಸಂತಸ ತಂದಿದೆ ಎಂದರು.
ಪರಿಷತ್ತಿನ ತಾಲೂಕು ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸಾಹಿತ್ಯ ಪರಿಷತ್ತನ್ನು ಚಳವಳಿ ರೂಪದಲ್ಲಿ ತೆಗೆದುಕೊಂಡು ಹೋಗು ತ್ತಿದ್ದೇವೆ.
ಗುಣಾತ್ಮಕ ಸಮ್ಮೇಳನ ಮಾಡಿದ ಆತ್ಮ ಸಂತೋಷವಿದೆ. ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಪರಿಷತ್ ಕ್ರಿಯಾಶೀಲ ವಾಗಿರಲಿದೆ.  ಮುಂದಿನ ದಿನಗಳಲ್ಲೂ ಸಮ್ಮೇಳನಗಳನ್ನು ಗುಣಾತ್ಮಕವಾಗಿ ಕಟ್ಟಲು ಪ್ರಯತ್ನಿಸುತ್ತೇವೆ ಎಂದರು.
ಶೀಘ್ರದಲ್ಲೇ ಪೂರ್ಣ ಪ್ರಮಾಣದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದೇನೆ. ಸಮ್ಮೇಳನದ ಲೆಕ್ಕಪತ್ರಗಳನ್ನು ನೀಡುತ್ತೇವೆ. ಮುಂದಿನ ವರ್ಷದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹುಳಿಯಾರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.
ಇದೇ ವೇಳೆ ಡಾ. ಎಂ.ವಿ. ನಾಗರಾಜರಾವ್ ಅವರ ನದಿಯ ದಡದ ಮೆಟ್ಟಿಲು, ಹುಳಿಯಾರು ಷಬ್ಬೀರ್ ಅವರ ಗುಜರಿ, ಜೆ. ಪ್ರವೀಣ್ ಅವರ ಜೆ.ಪಿ. ಡಬ್ಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ಡಾ.ರಾಜಪ್ಪ ದಳವಾಯಿ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎನ್.ಶೇಖರ್ ಇತರರು ಇದ್ದರು.