Saturday, 14th December 2024

ಟಿಕೆಟ್ ತಪ್ಪಿದರೂ ಬಿಜೆಪಿಯಲ್ಲೇ ಇರುತ್ತೇನೆ: ಎಸ್.ಎ.ರಾಮದಾಸ್

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ತಪ್ಪಿದರೂ ಬಿಜೆಪಿಯಲ್ಲೇ ಇರುತ್ತೇನೆ.‌ ಶ್ರೀವತ್ಸ ಅವರ ಪರ ಪ್ರಚಾರ ನಡೆಸುತ್ತೇನೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರಿನ ಮಾತನಾಡಿದ ರಾಮದಾಸ್, ವಿಧಾನಸಭೆ ಚುನಾವಣಾ ಕಣಕ್ಕಿಳಿಯದಿರಲು ತೀರ್ಮಾನಿಸಿದ್ದಾರೆ. ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರ ಪ್ರಚಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀವತ್ಸ ನಾಮಪತ್ರ ಸಲ್ಲಿಸುವ ವೇಳೆಯೂ ಹಾಜರಿರುತ್ತೇನೆ. ಇನ್ನು ಮುಂದೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಶಾಸಕ ರಾಮದಾಸ್ ಹೇಳಿದ್ದಾರೆ. ನನಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಪ್ರೀತಿ. ಜೀವ ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ನನಗೆ ಶಾಸಕ ಸ್ಥಾನ ಮುಖ್ಯ ಅಲ್ಲ. ನನ್ನ ದೇಶ ಮುನ್ನಡೆಸುತ್ತಿರುವ ವಿಶ್ವ ನಾಯಕ ಮೋದಿ ಅವರಿಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.

ಮುಂದಿನ 5 ವರ್ಷ ದೊಡ್ಡ ವಿಷನ್ ಇಟ್ಟುಕೊಂಡಿದ್ದೆ. ಅದನ್ನು ಈಡೇರಿಸಲು ಆಗುತ್ತಿಲ್ಲ ಅನ್ನೋ ಬೇಸರ ಇದೆ. ಜನರ ಜೊತೆ ಇರುತ್ತೇನೆ. ಪಕ್ಷದ ಸೂಚನೆ ಪಾಲಿಸುತ್ತೇನೆ. ಶಾಸಕ ಆಗುವುದಕ್ಕಿಂತ ಪ್ರಧಾನಿ ಮೋದಿ ಪ್ರೀತಿ ಮುಖ್ಯ. ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ರಾಷ್ಟ್ರದ ವಿಚಾರಕ್ಕಾಗಿ ಉತ್ತಮ ತೀರ್ಮಾನ ಮಾಡ್ತಿದ್ದೇನೆ. ಪಕ್ಷದ ಜೊತೆ ಇರುತ್ತೇನೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ರಾಮದಾಸ್ ತಿಳಿಸಿದರು.

ನಾನು ಆರ್.ಎಸ್.ಎಸ್ ಕಟ್ಟಾಳು ಆದ್ದರಿಂದ ಪಕ್ಷ ಹೇಳಿದಂತೆ ಮಾಡುತ್ತೇನೆ.‌ ನನ್ನ ಜೀವನದಲ್ಲಿ ಪಕ್ಷ ಒಳ್ಳೇದನ್ನು ಕೊಟ್ಟಿದೆ, ದುಃಖವನ್ನು ಕೊಟ್ಟಿದೆ, ನನ್ನ ವೈಯಕ್ತಿಕ ನಿಲುವಿಗಿಂತ ಪಕ್ಷ ಮುಖ್ಯ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.