Sunday, 24th November 2024

ಸಾವರ್ಕರ್ ವಿರುದ್ಧ ಯಾರೇ ಮಾತನಾಡಲಿ ಅವರು ದೇಶದ್ರೋಹಿಗಳು

ವಿಜಯಪುರ : ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ವಿರುದ್ಧ ಯಾರೇ ಮಾತನಾಡಲಿ ನನ್ನ ಪ್ರಕಾರ ಅವರು ದೇಶದ್ರೋಹಿಗಳು, ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷದವರಾಗಿದ್ದರೂ ಅವರಿಗೆ ತಕ್ಕ ಪಾಠ ಕಲಿಸಬೇಕು. ವೀರ ಸಾವರ್ಕರ್ ಅವರನ್ನು ಮನೆಮನೆಗೆ ಕೊಂಡೊಯ್ಯುವ ಕೆಲಸವನ್ನು ಯುವಕರು ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆನೀಡಿದ್ದಾರೆ.

ನಗರದಲ್ಲಿ ಸ್ವಾಮಿ ವಿವೇಕಾನಂದ ಸೇನೆ ಹಮ್ಮಿಕೊಂಡಿದ್ದ ನಾನೇ ಸಾವರ್ಕರ್ ಎನ್ನುವ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹಾಕಿದ್ದ ಸಾವರ್ಕರ್ ಬಾವಚಿತ್ರವನ್ನು ಕಿತ್ತು ಹಾಕಿದಮೇಲೆ ಹಾಗೂ ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡ ಮೇಲೆ ಸಾವರ್ಕರ್ ಅವರ ಬಗ್ಗೆ ಹಿಂದೂಗಳಲ್ಲಿ ಒಗ್ಗಟ್ಟು ಹೆಚ್ಚಿದ್ದು, ಅಭಿಮಾನ ಮೂಡುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ದೇಶಪ್ರೇಮ, ದೇಶಾಭಿಮಾನವೇ ಇಲ್ಲ. ಚೀನಾ ಪರವಾಗಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೆಂಥ ದೇಶಪ್ರೇಮ ಎಂದು ಪ್ರಶ್ನಿಸಿದರು. ಸಾವರ್ಕರ್ ಅವರನ್ನು ಕಂಡರೆ ಕಾಂಗ್ರೆಸ್ ಪಕ್ಷಕ್ಕೂ ಭಯ ಉಂಟಾಗಿದೆ. ಹೇಗಾದರೂ ಮಾಡಿ ಸಾವರ್ಕರ್ ಅವರನ್ನು ವಿರೋಧಿಸಲೇಬೇಕು ಅಂತ ಬಾಯಿಗೆ ಬಂದಹಾಗೆ ಮಾತಾಡ್ತಾರೆ.

ಕಾಂಗ್ರೆಸ್ ನವರು ಸಾವರ್ಕರ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲದವರು : ಕಾಂಗ್ರೆಸ್ ಪಕ್ಷದವರಿಂದ ಯಾರೂ ದೇಶಭಕ್ತಿ ಪಾಠ ಕಲಿಯಬೇಕಾಗಿಲ್ಲ. ಚೀನಾಕ್ಕೆ ಬೆಂಬಲ ವ್ಯಕ್ತಪಡಿಸಿ ನಮ್ಮ ದೇಶದ ವಿರುದ್ಧವೇ ಪ್ರತಿಭಟನೆ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ ಎರಡು ಸಾಲಿನ ಭಾಷಣಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಾವರ್ಕರ್ ಬಗ್ಗೆ ಮಾತನಾಡಲು ಅಯೋಗ್ಯ ಕಾಂಗ್ರೆಸ್ ಪಕ್ಷದವರಿಗೆ ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಭಗವಾಧ್ವಜ ನಮ್ಮ ದೇಶದ ರಾಷ್ಟ್ರಧ್ವಜ ಆಗಬೇಕಿತ್ತು : ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹಾಗೂ ರಾಷ್ಟ್ರಧ್ವಜ ಬರುವ ಮುಂಚೆಯೇ ಭಗವಾಧ್ವಜವು ನಮ್ಮ ರಾಷ್ಟ್ರಧ್ವಜ ಆಗುವ ಎಲ್ಲ ಲಕ್ಷಣಗಳಿದ್ದವು. ಆದರೆ ಕೆಲವರ ಕುತಂತ್ರದಿಂದ ಅದು ಸಾಧ್ಯವಾಗಲಿಲ್ಲ. ನಾವು ಮೊದಲು ವಂದೇ ಮಾತರಂ ಗೀತೆಯನ್ನು ತುಂಡರಿಸಿದೆವು, ನಂತರ ರಾಷ್ಟ್ರಧ್ವಜವನ್ನು ತುಂಡು ಮಾಡಿದೆವು, ಆಮೇಲೆ ಈ ದೇಶವನ್ನೇ ಎರಡು ಭಾಗಮಾಡಿ ಹಿಂದೂಸ್ತಾನ ಹಾಗೂ ಪಾಕಿಸ್ತಾನ ಮಾಡಿದೆವು ಎಂದು ಆಕ್ರೋಶ ವ್ಯಕ್ತಪಡಿಸಿದೆವು.

ಮನೆಮನೆಗೂ ಸಾವರ್ಕರ್ ಬರಬೇಕು : ಕಾಂಗ್ರೆಸ್ ಪಕ್ಷದವರ ಅಸಂಬದ್ಧ ಹೇಳಿಕೆಯಿಂದ ಸಾವರ್ಕರ್ ಬಗ್ಗೆ ಹಿಂದೂಗಳಲ್ಲಿ ಹೆಮ್ಮೆಯ ಕಿಚ್ಚು ಹೊತ್ತಿಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿದರೆ ಏನು ಪರಿಣಾಮ ಆಗುತ್ತೆ ಅನ್ನೋದನ್ನ ನಾವು ತೋರಿಸಿಕೊಡುವ ಕಾಲ ಬಂದಿದೆ. ಆಳೆತ್ತರದ ಸಾವರ್ಕರ್ ಕಟೌಟ್ ನಿಲ್ಲಿಸುತ್ತೇವೆ ಯಾರೂ ಏನು ಮಾಡೋತ್ತಾರೋ ನೋಡಿಯೇ ಬಿಡೋಣ ಎಂದು ಸವಾಲು ಹಾಕಿದರು. ಅಲ್ಲದೆ ಈಗ ಸಿಕ್ಕಿರುವ ಅವಕಾಶವನ್ನು ಹಿಂದೂ ಯುವಕರು ಸರಿಯಾಗಿ ಬಳಕೆ ಮಾಡಿಕೊಂಡು ಸಾವರ್ಕರ್ ಬಗ್ಗೆ ಕಾಂಗ್ರೆಸ್ ಪಕ್ಷದವರಿಗೂ ಪಾಠ ಮಾಡುವಂತಾಗಬೇಕು ಎಂದು ಕರೆನೀಡಿದರು. ಅಗತ್ಯ ಬಿದ್ರೆ ಸಿದ್ದರಾಮಯ್ಯ ಅವರಿಗೂ ಗಣಪತಿ ಪೆಂಡಾಲ್ ಗೆ ಕರೆದುಕೊಂಡು ಬಂದು, ಸಾವರ್ಕರ್ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ಸಿಗರು ಬೈದಷ್ಟು ದೇಶಭಕ್ತರು ಗಟ್ಟಿಯಾಗುತ್ತಿದ್ದಾರೆ. ಇವತ್ತು ಪ್ರತಿಪೆಂಡಾಲ್ ಗೂ ಸಾವರ್ಕರ್ ಬರಲು ಕಾಂಗ್ರೆಸ್ ಪಕ್ಷದವರೆ ಕಾರಣ ಎಂದು ಹೇಳಿದರು.

ಯಾರೂ ಕೂಡಾ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಬಾರದು. ಹೀಗೆ ಮಾತನಾಡಿದರೆ ಅವರಿಗೆ ತಕ್ಕ ಪಾಠ ಕಲಿಸಬೇಕು. ಇವತ್ತು ಸಾವರ್ಕರ್ ಬಗ್ಗೆ ಮಾತನಾಡುವವರು ನಾಳೆ, ಭಗತ್ ಸಿಂಗ್, ರಾಜಗುರು, ಸುಖದೇವ್ ಬಗ್ಗೆಯೂ ಮಾತನಾಡುತ್ತಾರೆ. ಅಂತಹ ರಾಜಕಾರಣಿಗಳಿಗೆ ಪಾಠ ಕಲಿಸಲು ಯುವಕರು ಮುಂದಾಗಬೇಕು. ನಾವು ಯಾವತ್ತೂ ಹಿಂದುಗಳಿಗೆ ಕಲ್ಲು ತುರುವುದು, ಕೊಲೆ ಮಾಡುವುದು ಹೇಳಿಕೊಡಲಿಲ್ಲ. ಬದಲಾಗಿ ದೇಶಪ್ರೇಮ ಬಿತ್ತಿದ್ದೇವೆ, ಸಾವರ್ಕರ್ ಬಗ್ಗೆ ನಾನು ಸಂಕ್ಷಿಪ್ತವಾಗಿ ಬರೆದ ಸಣ್ಣ ಪುಸ್ತಕ ಎರಡುವರೆ ಲಕ್ಷ ಪ್ರಿಂಟ್ ಕಂಡಿವೆ ಅಂದರೆ, ಸಾವರ್ಕರ್ ಅವರ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈದೇ ವೇಳೆ ವಿವೇಕಾನಂದ ಸೇನೆ ವತಿಯಿಂದ ನಗರದ ಗಣೇಶ ಮಂಡಳಿಗಳಿಗೆ ನೀಡುವ ವೀರ ಸಾವರ್ಕರ್ ಅವರ ಬಾವಚಿತ್ರವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ, ಗುರು ಗಚ್ಚಿನಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.