Thursday, 12th December 2024

ಅಧ್ಯಕ್ಷರಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಆಯ್ಕೆ

ಡಿ. 3 ರಂದು ಅಜ್ಜೇನಹಳ್ಳಿಯಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ 

ಚಿಕ್ಕನಾಯಕನಹಳ್ಳಿ : ಡಿ. 3 ರಂದು ಶೆಟ್ಟಿಕೆರೆಯ ಹೋಬಳಿಯ ಅಜ್ಜೇನಹಳ್ಳಿಯಲ್ಲಿ ನಡೆಯಲಿರುವ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಾ.ಚಿ.ನಾಗೇಶ್ ಅವರು 1985 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿ, ಸಂಶೋಧನಾರ್ಥಿಗಳಿಗೆ ಮಾರ್ಗದರ್ಶಕ ರಾಗಿ, ಮುಖ್ಯೋಪಾಧ್ಯಯರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಜಾನಪದ, ಭಜನೆ, ಆಸಕ್ತ ಕನ್ನಡದ ಹೋರಾಟದ ಮೂಲಕ ಕನ್ನಡ ಸಾಹಿತ್ಯ ಸೇವೆ ಕೈಗೊಂಡಿದ್ದಾರೆ. ಅಪಾರ ಶಿಷ್ಯ ವೃಂದ ಹೊಂದಿರುವ ನಾಗೇಶ್ ಅವರು ಕನ್ನಡದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಕನ್ನಡವನ್ನು ಉಳಿಸಿ ಬೆಳಸುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ.

ಸಾ.ಚಿ. ನಾಗೇಶ್ ಅವರ ಪರಿಚಯ : ಇವರು ಶೆಟ್ಟಿಕೆರೆ ಹೋಬಳಿಯ ಸಾಸಲು ಗೊಲ್ಲರ ಹಟ್ಟಿಯಲ್ಲಿ 1961 ರಲ್ಲಿ ಜನಿಸಿದ್ದಾರೆ. ತಂದೆ ಚಿಕ್ಕಣ್ಣ, ತಾಯಿ ಬಾಲಮ್ಮ, ಹಾಗು ಅಣ್ಣ ನಿವೃತ್ತ ಬಿಇಎಂಎಲ್ ನೌಕರ ಎಸ್.ಸಿ.ಮಹಾದೇವಯ್ಯನವರು ಇವರನ್ನು ಲಾಲಿಸಿ, ಪಾಲಿಸಿದ್ದಾರೆ.

ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಪದವಿಯನ್ನು ವ್ಯಾಸಂಗ ಮಾಡಿ ಮಧುಗಿರಿಯ ಟಿ. ವೆಂಕಟಸ್ವಾಮಿ ಕಾಲೇಜಿನಲ್ಲಿ ಬಿ.ಎಡ್ ತರಬೇತಿ ಮುಗಿಸಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಇಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಮ್ಮ ಸುಧೀರ್ಘ 36 ವರ್ಷಗಳ ಅನುಭವದಲ್ಲಿ ಭೋಧಕರಾಗಿ ಅಲ್ಲದೆ ಕನ್ನಡ, ಇತಿಹಾಸ ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶಕ ರಾಗಿ ಸೇವೆ ಸಲ್ಲಿಸಿದ್ದಾರೆ.

ಸೇವೆಗಳು ಮತ್ತು ಅನುಭವಗಳು: ಶಿಕ್ಷಕರ ಖಾಯಂತಿಗಾಗಿ ಸುಳ್ಯದಲ್ಲಿ ಹೋರಾಟ, ಧಾರ್ಮಿಕ, ಜನಪದ, ಕೋಲಾಟ, ಭಜನೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿಕೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ತುಮಕೂರು ಜಿಲ್ಲಾ  9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಚಾಲಕ ಹಾಗು ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಟ್ಟದ 5 ಮತ್ತು 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಇವರ ಮಾರ್ಗದರ್ಶನದಲ್ಲಿ ನಡೆಯಿತು.

ನಂತರದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಗರೀಕ ಗೌರವವನ್ನು ಕಸಾಪ ವತಿಯಿಂದ ಸಮರ್ಪಿಸಲಾಯಿತು. ರಾಜ್ಯ ಸರಕಾರಿ ನೌಕರರ ಸಂಘದ ಪರಿಷತ್ ಸದಸ್ಯರಾಗಿ, ಚಿ.ನಾ.ಹಳ್ಳಿ ತಾಲ್ಲೂಕು ಗೊಲ್ಲ ನೌಕರರ ಸಂಘದ ಅಧ್ಯಕ್ಷರಾಗಿ ಹೀಗೆ ಹಲ ವಾರು ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ. ಪ್ರಸ್ತುತ ತಿಪಟೂರಿನಲ್ಲಿ ವಾಸವಿದ್ದು ಕೃಷಿ ಕಾಯಕದಲ್ಲಿ ತೊಡಗಿ ತಮ್ಮ ಜೀವನದ ಸಾರ್ಥಕತೆಯನ್ನು ಈ ನೆಲದ ಸಂಸ್ಕೃತಿಗೆ ಮುಡುಪಾಗಿಸಿದ್ದಾರೆ.