Thursday, 12th December 2024

Self Harming: ಪತಿಗೆ ಅನೈತಿಕ ಸಂಬಂಧ; ವಿಡಿಯೊ ಕಾಲ್‌ ಮಾಡುತ್ತಲೇ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ

Self Harming

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಪತ್ನಿ, ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹುಳಿಮಾವಿನ ಅಕ್ಷಯನಗರದಲ್ಲಿ ಎರಡು‌ ದಿನಗಳ ಹಿಂದೆ ಘಟನೆ ನಡೆದಿದೆ. ಗಂಭೀರ ಗಾಯಗಳಾಗಿದ್ದ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅನುಷಾ ಮೃತಪಟ್ಟಿದ್ದಾರೆ.

ಐದು ವರ್ಷದ ಹಿಂದೆ ಶ್ರೀಹರಿ ಎಂಬಾತನ ಜತೆಗೆ ಅನುಷಾ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಇದೆ. ಆದರೆ, ಪತಿಗೆ ಅನೈತಿಕ ಸಂಬಂಧ ಇದ್ದ ಹಿನ್ನೆಲೆ ಆತ, ಡಿವೋರ್ಸ್‌ ನೀಡುವಂತೆ ಕಳೆದ ಮೂರು ತಿಂಗಳಿಂದ ಪತ್ನಿಗೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಮಹಿಳೆ ಬಾತ್ ರೂಮ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಗಂಡನಿಗೆ ವಿಡಿಯೊ ಕಾಲ್ ಮಾಡುತ್ತಲೇ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಹಚ್ಚಿಕೊಳ್ಳುವುದು ನೋಡಿದರೂ ಶ್ರೀಹರಿ ಸುಮ್ಮನಿದ್ದ ಎನ್ನಲಾಗಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಳ ಅಕ್ಕ ಉಷಾ ಪ್ರತಿಕ್ರಿಯಿಸಿ, ನನಗೆ ಬೇರೆ ಸಂಬಂಧ ಇದೆ, ನನ್ನ ಬಿಟ್ಟು ಬಿಡು ಎಂದು ನನ್ನ ತಂಗಿಗೆ ಶ್ರೀಹರಿ ಹೇಳುತ್ತಿದ್ದ. ಬೆಂಕಿ ಹಚ್ಚಿಕೊಳ್ಳುವಾಗ ಕಾಪಾಡಬಹುದಿತ್ತು, ಆದರೂ ಕಾಪಾಡಿಲ್ಲ. ಸಾಯಲಿ ಅಂತಲೇ ಸುಮ್ಮನೆ ಇದ್ದಾನೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡುತ್ತಿದ್ದ ಎಂದು ಹೇಳಿದ್ದಾರೆ.

ಇದನ್ನೂ ಓದಿ | Narayana Yaji Column: ಹೆಜ್ಜೆ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ

ಮೃತಳ ತಂದೆ ಹೇಮಂತ್ ಪ್ರತಿಕ್ರಿಯಿಸಿ, ಮೂರು ತಿಂಗಳಿನಿಂದ ಇಬ್ಬರ ನಡುವೆ ಜಗಳ ಹೆಚ್ಚಾಗಿತ್ತು. ಠಾಣೆಗೆ ದೂರು ಕೊಡೋಣ ಎಂದು ಹೇಳಿದ್ದೆ. ಇಲ್ಲ ಸಂಸಾರ ಸರಿ ಮಾಡಿಕೊಳ್ಳುವೆ ಎಂದಿದ್ದಳು. ಅವನು ಮನೆಯಲ್ಲೇ ಇದ್ದ. ಆದರೂ ಕಾಪಾಡಿಲ್ಲ. ಬಾತ್‌ ರೂಮ್‌ನಲ್ಲಿ ವಿಡಿಯೊ ಕಾಲ್‌ ಮಾಡುತ್ತಲೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಮೊದಲೇ ಪೆಟ್ರೋಲ್ ತಗೊಂಡು ಬಂದು ಮನೆಯಲ್ಲಿ ಇಟ್ಟಿದ್ದಳು. ಇದೆಲ್ಲಾ ಗೊತ್ತಿದ್ದರೂ ಕಾಲ್ ರಿಸೀವ್ ಮಾಡಿಕೊಂಡು ಸುಮ್ಮನೆ ಇದ್ದಾನೆ ಎಂದು ಅಳಿಯನ ವಿರುದ್ಧ ಆರೋಪಿಸಿದ್ದಾರೆ.

4 ಯುವಕರನ್ನು ಬಲಿ ಪಡೆದ ವ್ಹೀಲಿಂಗ್‌ ಹುಚ್ಚು! ನಾಟಕ ನೋಡಲು ಬಂದವರು ಬೈಕ್‌ ಹರಿದು ದುರ್ಮರಣ

ವಿಜಯಪುರ: ಇಬ್ಬರು ಯುವಕರ ಬೈಕ್ ವ್ಹೀಲಿಂಗ್ (Bike Wheeling) ಹುಚ್ಚು ಅವರನ್ನೂ ಸೇರಿಸಿಕೊಂಡು ನಾಲ್ವರನ್ನು ಬಲಿ ಪಡೆದ (Road Accident) ಭಯಾನಕ ಘಟನೆ ವಿಜಯಪುರ (Vijayapura news) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ‌ ನಡೆದಿದೆ. ಅಪಘಾತದಲ್ಲಿ ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ.

ಗುರುವಾರ ಮಧ್ಯರಾತ್ರಿ ಕುಂಟೋಜಿ ಗ್ರಾಮದ ಹತ್ತಿರ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಬಾಗಲಕೋಟ ಜಿಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ಮೃತನಾಗಿದ್ದಾನೆ. ಮೃತರೆಲ್ಲರೂ ಮಲಗಲದಿನ್ನಿ ಗ್ರಾಮದವರು ಎಂದು ಹೇಳಲಾಗಿದೆ.

ಕುಂಟೋಜಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದ್ದು, ಜಾತ್ರೆಯ ಅಂಗವಾಗಿ ವಿವಿಧ ಶಕ್ತಿ ಪ್ರದರ್ಶನದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜೊತೆಗೆ ರಾತ್ರಿ ನಾಟಕ ಪ್ರದರ್ಶನವೂ ಇತ್ತು. ನಾಟಕ ನೋಡಲು ಸುತ್ತಲಿನ ಹಳ್ಳಿಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇವರಲ್ಲಿ ಕೆಲವು ಯುವಕರು ರಸ್ತೆ ಪಕ್ಕದಲ್ಲಿ ಮೂತ್ರ ವಿಸರ್ಜಿಸುತ್ತಿರುವಾಗ ವ್ಹೀಲಿಂಗ್ ಮಾಡುತ್ತ ಬರುತ್ತಿದ್ದ ಬೈಕು ಆಯತಪ್ಪಿ ಇವರೆಲ್ಲರಿಗೂ ವೇಗವಾಗಿ ಬಂದು ಗುದ್ದಿದೆ. ಪರಿಣಾಮ ಬೈಕ್ ಸವಾರರೂ ಸೇರಿ ಮೂವರು ತಲೆಗೆ ಭಾರೀ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದರು. ನಾಲ್ವರಿಗೆ ಗಾಯಗಳಾಗಿವೆ.

ಮೃತರಲ್ಲಿ ಇಬ್ಬರನ್ನು ಮಲಗಲದಿನ್ನಿಯ ರಾಯಪ್ಪ ಬಾಗೇವಾಡಿ, ಹಣಮಂತ್ರಾಯ ಕುರುಬಗೌಡ್ರ ಎಂದು ಗುರ್ತಿಸಲಾಗಿದೆ. ಇನ್ನಿಬ್ಬರ ಹೆಸರು ತಕ್ಷಣಕ್ಕೆ ತಿಳಿದುಬಂದಿಲ್ಲ. ಬಸವೇಶ್ವರ ಜಾತ್ರೆ ಅಂಗವಾಗಿ ರಾತ್ರಿ ನಡೆಯುತ್ತಿದ್ದ ನಾಟಕ ನೋಡಲು ಕಿಕ್ಕಿರಿದು ಜನ ಸೇರಿದ್ದಾಗ ಈ ದುರ್ಘಟನೆ ನಡೆದಿದೆ. ವ್ಹೀಲಿಂಗ್ ವೇಳೆ ನಾಲ್ವರ ಬಲಿ ಪಡೆದ ಬೈಕ್ ಪಲ್ಸರ್ 200cc ಆಗಿದ್ದು, ಇದರ ಮೇಲೆ ಅತಿ ವೇಗವಾಗಿ ಸಾಗುತ್ತಿದ್ದ ಯುವಕರು ತಮ್ಮೊಂದಿಗೆ ಇನ್ನಿಬ್ಬರ ಸಾವಿನ ಕದ ತೆರೆದಿದ್ದಾರೆ.

ಈ ಸುದ್ದಿ ಓದಿ: ಪೊಲೀಸರನ್ನೇ ಕಳ್ಳರಂತೆ ಕಾಯುವಂತಾಯಿತೇ ?!

ವಿಷಯ ತಿಳಿದ ಕೂಡಲೇ ಆರೋಗ್ಯ ಕವಚ ಅಂಬ್ಯೂಲೆನ್ಸ್ ಇಎಂಟಿ, ಚಲನಚಿತ್ರ ನಟರೂ ಆಗಿರುವ ಶ್ರೀಶೈಲ ಹೂಗಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ‌ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಬಾಗಲಕೋಟೆಗೆ ಕರೆದೊಯ್ಯಲಾಗಿದೆ. ಅವರಲ್ಲಿ ಒಬ್ಬ ಸಾವನ್ನಪ್ಪಿದ. ಇನ್ನೊಬ್ಬನ ಸ್ಥಿತಿಯೂ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.