ತುಮಕೂರು: ರಾಜ್ಯ ಸರಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ರಾಜ್ಯ ದಾದ್ಯಂತ ಉಚಿತವಾಗಿ ಪ್ರಯಾಣಿಸಲು ಮಹಿಳಾ ಪ್ರಯಾಣಿಕರಿಗಾಗಿ ಜೂನ್ 11 ರಿಂದ ಜಾರಿಗೆ ತಂದಿರುವ ಮಹತ್ವಪೂರ್ಣ ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗವು 24.42 ಕೋಟಿ ಆದಾಯವನ್ನು ಗಳಿಸಿದೆ.
ಯೋಜನೆ ಜಾರಿಗೊಂಡ ದಿನದಿಂದ ಜೂನ್ ಮಾಹೆಯಲ್ಲಿ ನಿರ್ವಾಹಕರು ವಿತರಿಸಿರುವ ಟಿಕೆಟ್ ಅನ್ವಯ ತುಮಕೂರು ವಿಭಾಗದ ವಾಹನಗಳಲ್ಲಿ 29.73 ಲಕ್ಷ ಮಹಿಳಾ ಪ್ರಯಾ ಣಿಕರು ಪ್ರಯಾಣಿಸಿದ್ದು, 8,32,99,464 ರು ಸಾರಿಗೆ ಆದಾಯ ಹಾಗೂ ಜುಲೈ ಮಾಹೆ ಯಲ್ಲಿ 57.97 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, 16,09,59,460 ರಿ.ಗಳಷ್ಟು ಸಾರಿಗೆ ಆದಾಯ ಬಂದಿದೆ.
ಒಟ್ಟಾರೆ ಜೂನ್ ಮತ್ತು ಜುಲೈ ಮಾಹೆಯಲ್ಲಿ 87.71 ಲಕ್ಷ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸಿ ನಿಗಮಕ್ಕೆ 24,42,58,924 ರು ಆದಾಯ ತಂದುಕೊಟ್ಟಿದ್ದಾರೆ. ಯೋಜನೆ ಜಾರಿಗೆ ಬರುವ ಮುನ್ನ ಪ್ರತಿ ಮಾಹೆ ನಿಗಮಕ್ಕೆ ಪ್ರತೀ ದಿನದ ಆದಾಯ ಸರಾಸರಿ 72.45 ಲಕ್ಷ ಗಳಷ್ಟಿತ್ತು.
ಮಹಿಳೆಯರಿಗೆ ವರದಾನ: ಯೋಜನೆ ಜಾರಿಯಾದ ನಂತರ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮಾಸಿಕ ಪಾಸ್ ಪಡೆದು ಪ್ರತೀ ದಿನ ಸಾರಿಗೆ ಬಸ್ಸುಗಳಲ್ಲಿ ಸಂಚರಿಸುತ್ತಿದ್ದ ಉದ್ಯೋಗಸ್ಥ ಮಹಿಳೆಯರಿಗೆ ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು, ಕೂಲಿ ಕಾರ್ಮಿಕ ಮಹಿಳೆಯರು, ನಿರುದ್ಯೋಗಿ ಮಹಿಳೆಯರು ಹಾಗೂ ಗಾರ್ಮೆಂಟ್ಸ್ ನೌಕರಸ್ಥ ಮಹಿಳೆಯರಿಗೆ ಶಕ್ತಿ ಯೋಜನೆಯು ವರದಾನ ವಾಗಿದೆ.
ಪಾಸುಗಳ ವಿತರಣೆ ಇಳಿಕೆ
ಪ್ರತೀ ದಿನ ಸಂಚರಿಸುವ ಮಹಿಳಾ ಪ್ರಯಾಣಿಕರು, ವಿದ್ಯಾರ್ಥಿನಿಯರು ದೈನಂದಿನ ಪಾಸು ಹಾಗೂ ಮಾಸಿಕ ಪಾಸುಗಳನ್ನು ಪಡೆಯದೇ ಇರುವುದರಿಂದ ಪಾಸುಗಳ ವಿತರಣೆಯ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 2022ರ ಜೂನ್ ಮಾಹೆಗೆ ಹೋಲಿಕೆ ಮಾಡಿದಾಗ ಸುಮಾರು 2161 ಮಾಸಿಕ ಹಾಗೂ 2033 ದೈನಂದಿನ ಪಾಸುಗಳ ಮಾರಾಟ ಕಡಿಮೆಯಾಗಿದೆ.
ಪುಣ್ಯಕ್ಷೇತ್ರಗಳಿಗೆ ಮಹಿಳೆಯರ ಪ್ರಯಾಣ ಏರಿಕೆ
ಶಕ್ತಿ ಯೋಜನೆಯಿಂದ ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಪುಣ್ಯಕ್ಷೇತ್ರಗಳಿಗೆ ಮಹಿಳೆಯರ ಪ್ರಯಾಣ ಸಂಖ್ಯೆ ಏರಿಕೆ ಕಂಡಿದ್ದು, ಈವರೆಗೂ 18 ಲಕ್ಷ ಮಹಿಳೆಯರು ಪುಣ್ಯಕ್ಷೇತ್ರ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಪುಣ್ಯಕ್ಷೇತ್ರವಲ್ಲದೆ ಪ್ರೇಕ್ಷ ಣೀಯ ಸ್ಥಳಗಳಿಗೂ ಮಹಿಳೆಯರು ತಮ್ಮ ಕುಟುಂಬದೊಂದಿಗೆ ಭೇಟಿ ನೀಡುತ್ತಿರುವುದರಿಂದ ನಿಗಮದ ಆದಾಯ ದುಪ್ಪಟ್ಟಾಗು ತ್ತಿದೆ.
ಐಷಾರಾಮಿ ಬಸ್ಸುಗಳಲ್ಲಿ ಅವಕಾಶವಿಲ್ಲ
ಮಹಿಳೆಯರ ಉಚಿತ ಪ್ರಯಾಣವು ರಾಜ್ಯಕ್ಕೆ ಮಾತ್ರ ಸೀಮೀತವಾಗಿದೆ. ನಗರ ಸಾರಿಗೆ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸಾಮಾನ್ಯ ಹಾಗೂ ವೇಗದೂತ ಬಸ್ಸು ಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿದ್ದು, ಡಿಲಕ್ಸ್, ಐರಾವತದಂತಹ ಐಷಾರಾಮಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.
ಗುರುತಿನ ಚೀಟಿ ಕಡ್ಡಾಯ
ರಾಜ್ಯದ ನಿವಾಸಿಗಳಿಗೆ ಮಾತ್ರ ಈ ಯೋಜನೆ ಸೌಲಭ್ಯ ದೊರೆಯಲಿದ್ದು, ಹೊರ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆ ಸೌಲಭ್ಯ ತಪ್ಪಿಸುವ ಉದ್ದೇಶದಿಂದ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ಶಕ್ತಿ ಯೋಜನೆ ಸೌಲಭ್ಯ ಪಡೆಯಲಿಚ್ಛಿಸು ವವರಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಗುವುದು. ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವವರೆಗೆ ಮತದಾರರ ಗುರುತಿನ ಚೀಟಿ, ಆಧಾರ್ ಚೀಟಿ, ಚಾಲನಾ ಪರವಾನಗಿ ಪತ್ರ, ವಾಸಸ್ಥಳ ನಮೂದಿಸಿರುವ ಭಾರತ ಸರಕಾರದ ಇಲಾಖೆಗಳು, ಭಾರತ ಸರಕಾರದ ಸಾರ್ವಜನಿಕ ವಲಯದ ಉದ್ಯಮ, ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದಿಂದ ವಿತರಿಸಿರುವ ಗುರುತಿನ ಚೀಟಿ ಹೊಂದಿರುವ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕಾಗಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಜಿಲ್ಲಾ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್. ಗಜೇಂದ್ರಕುಮಾರ್ ತಿಳಿಸಿದ್ದಾರೆ.