Friday, 20th September 2024

Sharanabasappa Gowda Darshanapura: ವಿವಿಧತೆಯಲ್ಲಿ ಏಕತೆ ಪ್ರತಿಪಾದನೆಯ ಏಕೈಕ ದೇಶ ಭಾರತ- ಜಿಲ್ಲಾ ಉಸ್ತುವಾರಿ ಸಚಿವ

ಶರಣಬಸಪ್ಪ ಗೌಡ ದರ್ಶನಾಪುರ

ಪ್ರಜಾಪ್ರಭುತ್ವ ಹಬ್ಬಕ್ಕೆ ಅಭೂತಪೂರ್ವ ಬೆಂಬಲ
ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ತುನ್ನೂರ : ಸಂಘಟನೆಗಳ ಆಕ್ರೋಶ

ಯಾದಗಿರಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ರಾಜ್ಯದ ಮುಕುಟ ಬೀದರ ಜಿಲ್ಲೆಯಿಂದ ಚಾಮರಾಜನಗರ ವರಗೆ ಹಮ್ಮಿಕೊಂಡಿದ್ದ 2500 ಕಿಮೀ ಮಾನವ ಸರಪಳಿ ನಿರ್ಮಾಣ ಕಾರ್ಯ ಕ್ರಮಕ್ಕೆ ಜಿಲ್ಲೆಯ ಜನತೆ ಉತ್ಸಾಹದಿಂದ ಭಾಗಿಯಾಗುವ ಮೂಲಕ ಅಭೂತಪೂರ್ವ ಬೆಂಬಲ ನೀಡಿ ಯಶಸ್ವಿ ಗೊಳಿಸಿದರು.

ಯರಗೋಳ ಗ್ರಾಮದಿಂದ ಗೂಗಲ್ ಬ್ರಿಜ್ ವರಗೆ 61 ಕಿಮೀವರಗೆ ಮಾನವ ಸರಪಳಿ ನಿರ್ಮಿಸಲಾಯಿತು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಪ್ರಜಾ ಪ್ರಭುತ್ವದ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಬಗ್ಗೆ ಮಾನವ ಸರಪಳಿ ನಿರ್ಮಿಸುವ ಉದ್ದೇಶ ನಾವೆಲ್ಲರೂ ಕೂಡ ಒಂದೇ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದಾಗಿದೆ. ನಾಡಿನ ಜನರು ಕೈ ಜೋಡಿಸಿದಾಗ ಮಾತ್ರ ರಾಜ್ಯ, ರಾಷ್ಟ್ರ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ದಿನ ವಿಶೇಷ ಹಾಗೂ ಇತಿಹಾಸದ ದಿನವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಬೀದರ್ ಜಿಲ್ಲೆಯಿಂದ ಚಾಮರಾಜನಗರದ ವರೆಗೆ ಸುಮಾರು 2500 ಕಿಲೋಮೀಟರ್ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿ ರುವುದು ನಿಜಕ್ಕೂ ಸ್ಮರಣೀಯವಾಗಿದೆ. ಭಾರತ ದೇಶದಲ್ಲಿ ವಿವಿಧ ಜಾತಿ, ಧರ್ಮ, ಜನಾಂಗ, ಭಾಷೆ, ಆಚಾರ ವಿಚಾರ, ಸಂಸ್ಕೃತಿ ಇತ್ಯಾದಿಗಳ ವೈವಿದ್ಯಗಳು ಇದ್ದುರೂ, ಇಂದಿಗೂ ಕೂಡ ಭಾರತ ವಿವಿಧತೆಯಲ್ಲಿ ಏಕತೆ ಪ್ರತಿಪಾದಿಸಿ ಕೊಂಡು ಬಂದಂತಹ ಜಗತ್ತಿನ ಏಕೈಕ ದೇಶ, ಜಾತ್ಯಾತೀತ ತತ್ವಗಳ ಅಡಿಯಲ್ಲಿ ರೂಪಿತವಾದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ನಮ್ಮೆಲ್ಲರಲ್ಲಿ ಅಡಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಪಾಟೀಲ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲವೀಶ್ ಒರಡಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

*

ಪ್ರಜಾಪ್ರಭುತ್ವ ಬಲಪಡಿಸಿ ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಸೌಹಾರ್ದತೆಯ ಭದ್ರ ಬುನಾದಿ ಮೇಲೆ ನಿಂತಿದೆ. ನಾವು ಆಳವಾದ, ಸಹಭಾಗಿತ್ವದ ಪ್ರಜಾಪ್ರಭುತ್ವಕ್ಕೆ ಬದ್ಧರಾಗಿರೋಣ ಮತ್ತು ಗೌರವಿ ಸೋಣ.
ಚನ್ನಾರಡ್ಡಿ ಪಾಟೀಲ ತುನ್ನೂರ , ಶಾಸಕರು ಯಾದಗಿರಿ

ತುನ್ನೂರ ಭಾಗಿ: ಸಂಘಟನೆಗಳು ಕಿಡಿ
ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಪಿಎಸ್ಐ ಪರಶುರಾಮ್ ಸಾವಿನ ಪ್ರಕರಣದ ಎ1 ಆರೋಪಿಯೂ ಆಗಿರುವ ಯಾದಗಿರಿ ಚನ್ನಾರಡ್ಡಿ ಪಾಟೀಲ ತುನ್ನೂರ ವಿರುದ್ಧ ದಲಿತಪರ ಹಾಗೂ ಕನ್ನಡ ಸಂಘಟನೆಗಳ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಪ್ರಸಂಗ ಸಹ ನಡೆಯಿತು.

ಮೊದಲಿಗೆ ಭೀಮ್ ಹಾಗೂ ಜೈ ಸಂವಿಧಾನ’ ಘೋಷಣೆಯನ್ನು ಹಾಕದ ಹಿನ್ನಲೆಯಲ್ಲಿ ಜಿಲ್ಲಾಡಳಿತ ವಿರುದ್ಧ ಧ್ವನಿ ಎತ್ತಿದ ಜಿಲ್ಲೆಯ ದಲಿತ ಮುಖಂಡರು, ಅನಂತರ ಏಕಾಏಕಿ, ಪಿಎಸ್ಐ ಪರಶುರಾಮ ಸಾವಿನ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ್ ಅವರ ವಿರುದ್ದವೂ ಧಿಕ್ಕಾರ ಕೂಗಿ ಒಬ್ಬ ಅಧಿಕಾರಿಯ ಸಾವಿನ ಪ್ರಕರಣ ಆರೋಪಿಯಾಗಿರುವರು ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೇಗೆ ಸಾಧ್ಯ? ಇದು ನಿಜಕ್ಕೂ ಜಿಲ್ಲಾಡಳಿತ ವೈಫಲ್ಯ ಎಂದು ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗೆ ಮುತ್ತಿಗೆ ಹಾಕಿದರು.

ಈ ವೇಳೆ ಪರಿಸ್ಥಿತಿ ಬಿಗಾಡಿಯಿಸುತ್ತಿದಂತೆ ಶಾಸಕ ತುನ್ನೂರ ಅವರು ಅಲ್ಲಿಂದ ಪೊಲೀಸ್ ಭದ್ರತೆಯೊಂದಿಗೆ ಕಾಲ್ಕಿತ್ತರು. ಇದಾದ ನಂತರ ಡಿಸಿ ಸುಶೀಲಾ ಬಿ ಅವರತ್ತ ತೆರಳಿದ ಸಂಘಟನೆಗಳ ಮುಖಂಡರ, ಅವರನ್ನು ಕಾರ್ಯ ಕ್ರಮಕ್ಕೆ ಹೇಗೆ ಆಹ್ವಾನ ನೀಡಿದ್ದೀರಿ? ಪ್ರಕರಣದ ತನಿಖೆ ನಡೆಯುತ್ತಿರುವಾಗ ಸರಕಾರಿ ಕಾರ್ಯಕ್ರಮದಲ್ಲಿ ಭಾಗಿ ಯಾಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ, ಈ ರೀತಿ ಘಟನೆ ಮುಂದೆ ಜರುಗಿದರೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, ನಾವು ಶಿಷ್ಟಾಚಾರ ಪಾಲನೆ ಮಾಡಿದ್ದೇವೆ ಎಂದು ಹೇಳಿ ಸಮಜಾಯಿಸಿ ನೀಡಿದರು. ಆಗ ಪರಿಸ್ಥಿತಿ ತಿಳಿಯಾಯಿತು.

ಇದನ್ನೂ ಓದಿ: Yadgir News: ಬಪ್ಪರಗಾ ಗ್ರಾಮದ ದಲಿತರಿಗೆ ಬಹಿಷ್ಕಾರ; ಸಾಮರಸ್ಯದಿಂದ ಬದುಕಲು ಮನವೊಲಿಸಿದ ಅಧಿಕಾರಿಗಳು