Sunday, 15th December 2024

ಶಿವಮೊಗ್ಗದಿಂದ ಇನ್ನೂ 3 ಮಾರ್ಗದಲ್ಲಿ ವಿಮಾನ ಹಾರಾಟ ಶೀಘ್ರ..!

ಶಿವಮೊಗ್ಗ: ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ನವೆಂಬರ್‌ನಲ್ಲಿ ಇನ್ನೂ 3 ಮಾರ್ಗದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.

ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಫೇಸ್‌ಬುಕ್ ಪೋಸ್ಟ್‌ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಎರಡು ಅಪ್‌ಡೇಟ್ ನೀಡಿದ್ದಾರೆ.

ಸಂಸದ ಬಿ. ವೈ. ರಾಘವೇಂದ್ರ ಫೇಸ್‌ಬುಕ್‌ ಪೋಸ್ಟ್‌ನಲ್ಲಿ, ‘ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಸಜ್ಜಾಗುತ್ತಿದೆ ಶಿವಮೊಗ್ಗ ವಿಮಾನ ನಿಲ್ದಾಣ. ರಾತ್ರಿ ವೇಳೆಯೂ ಇಲ್ಲಿಂದ ಹಾರಲಿವೆ ವಿಮಾನಗಳು’ ಎಂದು ಹೇಳಿದ್ದಾರೆ.

‘ಡಿಸೆಂಬರ್ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣ ತನ್ನ ಸಂಚಾರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ. ಇನ್ನೆರಡು ತಿಂಗಳಲ್ಲಿ ರಾತ್ರಿ ವೇಳೆಯೂ ಇಲ್ಲಿಂದ ವಿಮಾನಗಳ ಹಾರಾಟ ಶುರುವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ನೈಟ್ ಲ್ಯಾಂಡಿಂಗ್‌ಗೆ 2ನೇ ಹಂತದ ಒಪ್ಪಿಗೆಯೂ ಸಿಕ್ಕಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ಇದೇ ಪೋಸ್ಟ್‌ನಲ್ಲಿ ರಾಘವೇಂದ್ರ, ‘4 ಮಾರ್ಗಗಳಿಗೆ ವಿಮಾನಯಾನ ಸೇವೆಗೆ ಅನುಮತಿ ಸಿಕ್ಕಿದ್ದು, ಈಗಾಗಲೇ ಶಿವಮೊಗ್ಗ-ಬೆಂಗಳೂರು ಸಂಚಾರ ಆರಂಭ ವಾಗಿದೆ. ನವೆಂಬರ್ 25 ರಿಂದ ಹೈದರಾಬಾದ್, ಗೋವಾ, ತಿರುಪತಿಗೂ ಇಲ್ಲಿಂದ ವಿಮಾನ ಸಂಚಾರ ಆರಂಭವಾಗಲಿದೆ’ ಎಂದು ಹೇಳಿದ್ದಾರೆ.

ಕರ್ನಾಟಕದ 9ನೇ ಮತ್ತು ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಶಿವಮೊಗ್ಗ ವಿಮಾನ ನಿಲ್ದಾಣದ್ದು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಬೇಕು ಎಂಬ ಪ್ರಸ್ತಾವನೆ ಇದೆ. ಈ ವಿಮಾನ ನಿಲ್ದಾಣದಿಂದ ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.

ಬೆಂಗಳೂರು ಹೊರತುಪಡಿಸಿದರೆ ಅತಿ ಉದ್ದದ ರನ್ ವೇ ಹೊಂದಿರುವ ರಾಜ್ಯದ ವಿಮಾನ ನಿಲ್ದಾಣ. ಸದ್ಯ ಬೆಂಗಳೂರಿನಿಂದ ಮಾತ್ರ ಶಿವಮೊಗ್ಗಕ್ಕೆ ವಿಮಾನ ಸಂಪರ್ಕವಿದೆ. ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ 500 ರೂ. ಸಬ್ಸಿಡಿಯನ್ನು ರಾಜ್ಯ ಸರ್ಕಾರ ನೀಡಲಿದೆ.

ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಫೆಬ್ರವರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಆಗಸ್ಟ್‌ 31ರಂದು ವಿಮಾನ ಸೇವೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ದೆಹಲಿ ಸೇರಿದಂತೆ ದೇಶದ ನಾನಾ ನಗರಗಳಿಗೆ ಶಿವಮೊಗ್ಗದಿಂದ ನೇರ ವಿಮಾನ ಸೇವೆ ಆರಂಭವಾಗುವ ನಿರೀಕ್ಷೆ ಇದೆ.