Thursday, 12th December 2024

ಕುವೆಂಪು ವಿವಿಯ ನೂತನ ಕುಲಪತಿಯಾಗಿ ಡಾ.ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ

ಶಿವಮೊಗ್ಗ: ಕುವೆಂಪು ವಿವಿಯ ನೂತನ ಕುಲಪತಿಯಾಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಶರತ್ ಅನಂತಮೂರ್ತಿ ಅವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ರಾಜ್ಯಪಾಲ ಡಾ. ತಾವರ್ ಚಂದ್ ಗೆಹ್ಲೋಟ್ ಅವರು ಫೆ.5ರಂದು ಡಾ.ಶರತ್ ಅವರನ್ನು ಪೂರ್ಣಾವಧಿ ಕುಲಪತಿಯಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು.

ಪ್ರೊ. ಶರತ್ ಅನಂತಮೂರ್ತಿ ಕರ್ನಾಟಕದ ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಡಾ. ಯು ಆರ್ ಅನಂತಮೂರ್ತಿ ಪುತ್ರರಾಗಿದ್ದಾರೆ. ಇವರು ಅಮೆರಿಕಾದ ಪ್ರತಿಷ್ಠಿತ ಅಯೋವಾ ಸ್ಟೇಟ್ ವಿಶ್ವವಿದ್ಯಾಲಯದಿಂದ ಪಿಹೆಚ್. ಡಿ. ಪದವಿ ಪಡೆದಿದ್ದಾರೆ. ಪ್ರೊ. ಶರತ್ ಬೆಂಗಳೂರು ವಿವಿಯಲ್ಲಿ 2017ರ ವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ನಂತರ ಹೈದರಾಬಾದ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು.

ಅವರು 35ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಶೋಧನಾ ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ.

ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ, ಸಂವಾದಗಳು ನಡೆಯಬೇಕು. ವಿವಿಯನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಕೇಂದ್ರಿತವನ್ನಾಗಿಸಿ ಮುಕ್ತ ಮತ್ತು ನಿರ್ಭಿಡೆಯ ವಾತಾವರಣ ನಿರ್ಮಿಸುವುದರತ್ತ ಗಮನಹರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಯ ನಿಕಟಪೂರ್ವ ಪ್ರಭಾರ ಕುಲಪತಿ ಪ್ರೊ. ಎಸ್ ವಿ ಕೃಷ್ಣಮೂರ್ತಿ, ಕುಲಸಚಿವ ಎ ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್ ಎಂ ಗೋಪಿನಾಥ್, ಹಣಕಾಸು ಅಧಿಕಾರಿ ಜಿ.‌ ಬಂಗಾರಪ್ಪ, ಪ್ರೊ.‌ ಗುರುಲಿಂಗಯ್ಯ, ಡಾ. ಸತ್ಯಪ್ರಕಾಶ್. ಎಂ. ಆರ್ ಮತ್ತಿತರರು ಹಾಜರಿದ್ದರು.